ಸಾರಾಂಶ
ಹಾವೇರಿ: ಜಿಲ್ಲೆಯ ಸವಣೂರು ಹಾಗೂ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಬುಧವಾರ ಭೇಟಿ ನೀಡಿ ಪ್ರವಾಹದಿಂದ ಹಾನಿಯಾದ ಬೆಳೆ ಹಾಗೂ ಮನೆ ಹಾನಿ ಪರಿಶೀಲನೆ ನಡೆಸಿದರು.
ಕುಣಿಮೆಳ್ಳಿಹಳ್ಳಿ ವರದಾ ನದಿ ಹಳೆ ಸೇತುವೆ ಪಕ್ಕದ ಜಮೀನುಗಳಿಗೆ ನದಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಹಾನಿಯಾದ ಬೆಳೆ ಪರಿಶೀಲನೆ ನಡೆಸಿದರು. ಇದೇ ವೇಳೆ ರೈತರು ಬೆಳೆಹಾನಿ ಪರಿಹಾರ ನೀಡುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.ಗ್ರಾಮಸ್ಥರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಕುಣಿಮೆಳ್ಳಿಹಳ್ಳಿ ವರದಾ ನದಿ ಹಳೆ ಸೇತುವೆ ಮೇಲೆ ಸಂಚಾರ ಮಾಡುತ್ತಿದ್ದು, ಈ ಸೇತುವೆಯ ತಡೆಗೋಡೆಗಳಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಅದರಿಂದ ಸೇತುವೆಗೆ ಧಕ್ಕೆಯಾಗುವ ಸಂಭವವಿದೆ. ಗಿಡ-ಗಂಟಿಗಳನ್ನು ತೆರವುಗೊಳಿಸಲು ಸೇತುವೆ ಮೇಲೆ ಅಲ್ಲಲ್ಲಿ ನೀರು ನಿಲ್ಲುತ್ತಿದ್ದನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿಕೊಂಡರು.
ಆನಂತರ ಸಚಿವರು ನಾಗನೂರ-ಕೂಡಲ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಸಂಗೂರ, ಕೂಡಲ, ಬಾಳಂಬೀಡ ಗ್ರಾಮಗಳಲ್ಲಿ ಬೆಳೆಹಾನಿ ಹಾಗೂ ಮನೆಹಾನಿ ಪರಿಶೀಲನೆ ನಡೆಸಿದರು.ಸಂಗೂರ ಗ್ರಾಮಕ್ಕೆ ಆಗಮಿಸಿದ ಸಚಿವರು, ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಮನೆಯನ್ನು ವೀಕ್ಷಿಸಿ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ ಬುಧವಾರ ಸಂಜೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ಮನೆ ಹಾನಿ ಪರಿಹಾರ ಪರಿಷ್ಕರಣಾ ಸಭೆ ನಡೆದಿದ್ದು, ಅದರ ಮಾರ್ಗಸೂಚಿಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ಮಾರ್ಗಸೂಚಿ ಅನುಸಾರ ಮನೆ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಸಹಾಯ, ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಬಾಳಂಬೀಡದಲ್ಲಿ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ನದಿ ನೀರು ನುಗ್ಗಿ ಜಲಾವೃತಗೊಂಡಿದೆ. ಆದರೆ ಗ್ರಾಮದ ಕೆರೆಗೆ ನೀರು ಬಾರದಿರುವ ಕುರಿತು ಗಮನ ಸೆಳೆದರು. ಕೂಡಲೇ ಸ್ಪಂದಿಸಿದ ಸಚಿವರು, ನದಿಯಿಂದ ನೀರು ತುಂಬಿಸಲು ಅಗತ್ಯ ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಳಿಕ ಅಕ್ಕಿಆಲೂರು ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಚಿವರು ಕೆರೆಗೆ ಬಾಗಿನ ಅರ್ಪಿಸಿದರು.ಈ ವೇಳೆ ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಹೆಚ್ಚುವರಿ ಎಸ್ಪಿ ಸಿ. ಗೋಪಾಲ, ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖೀಜರ್, ಹಾವೇರಿ ತಹಸೀಲ್ದಾರ್ ಶಂಕರ ಜಿ.ಎಸ್., ಹಾನಗಲ್ಲ ತಹಸೀಲ್ದಾರ್ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.