ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಮ್ಮ ಸೈನಿಕ ಶಾಲೆಯ ಮಕ್ಕಳಲ್ಲಿ ಕೇವಲ ಅಕ್ಷರ ಏಕತೆಯನ್ನು ಬೀಜ ಬಿತ್ತದೇ ರಾಷ್ಟ್ರೀಯ ಏಕತೆ, ಸಮಗ್ರತೆ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದನ್ನೂ ಕಲಿಸಿಕೊಡಲಾಗುತ್ತದೆ. ಹಾಗೆಯೇ ಇತರರತ್ತ ಬೆರಳು ಮಾಡದೆ ತನ್ನ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂಥ ಶಿಕ್ಷಣ ನೀಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.ತಾಲೂಕಿನ ಸಂಗೊಳ್ಳಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಮುಖ್ಯ. ಶಾಲೆಯಲ್ಲಿ ಯಾವುದೇ ಮೂಲಸೌಲಭ್ಯಕ್ಕೆ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಕ್ಷರದ ಜತೆಗೆ ಶಿಸ್ತು, ಕಠಿನ ಶ್ರಮ, ಏಕತೆ, ದೇಶಾಭಿಮಾನದ ಪಾಠ ಮಾಡಲಾಗುತ್ತದೆ. ಹಲವು ಸಮರ ಕಲೆಗಳನ್ನು ಶಾಲಾ ಹಂತದಲ್ಲಿಯೇ ಕರಗತ ಮಾಡಲಾಗುತ್ತದೆ. ಈಜು, ಶೂಟಿಂಗ್ ತರಬೇತಿ, ಸೈನಿಕ ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ, ಸಿದ್ಧಗೊಳಿಸಲು ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿನ ಶಾಲೆಯ ಮೂಲಸೌಕರ್ಯಕ್ಕೆ ಬೇಕಿರುವ ಅನುದಾನ ನೀಡುವ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಬಾಕ್ಸ್.....
ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದ ಸಚಿವರುಹಿಂದುಳಿದ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ತಾಲೂಕಿನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳೀಯ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಅಧಿಕಾರಿಗಳೊಂದಿಗೆ ಗುರುವಾರ ಸೈನಿಕ ಶಾಲೆಗೆ ಭೇಟಿ ನೀಡಿದ ಸಚಿವರು ಶಾಲೆಯಲ್ಲಿನ ಮೂಲಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಚಿವರು ಶಾಲೆಯ ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹ, 30ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಬೃಹತ್ ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್, ಹಾಕಿ, ಕಬಡ್ಡಿ, ವಾಲಿಬಾಲ್ ಕೋರ್ಟ್‌ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
6ನೇ ತರಗತಿಯಿಂದ 12ನೇ ತರಗತಿವರೆಗೆ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದು, ಕೇಂದ್ರ ರಕ್ಷಣಾ ಇಲಾಖೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿನ ಶಿಕ್ಷಕರಿಗೆ ಮೈಸೂರಿನಲ್ಲಿರುವ ರಿಜೀನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ವಿಶೇಷ ತರಬೇತಿ ಕೊಡಿಸಲಾಗುತ್ತದೆ ಎಂದು ಇಲಾಖಾ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಸಚಿವರಿಗೆ ವಿವರಿಸಿದರು.ಸಿಎಂ ಸಿದ್ದರಾಮಯ್ಯನವರಿಂದ ರಾಕ್ ಗಾರ್ಡನ್ ಉದ್ಘಾಟನೆ: ತಂಗಡಗಿ
ಸೈನಿಕ ಶಾಲೆಯ ಪಕ್ಕದಲ್ಲಿ 10 ಎಕರೆ ಪ್ರದೇಶದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಸಂಗೊಳ್ಳಿರಾಯಣ್ಣ ಸಮಗ್ರ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್‌ಗೆ ಸಚಿವರು ಭೇಟಿ ನೀಡಿದರು.ಈಗಾಗಲೇ ರಾಕ್ ಗಾರ್ಡನ್‌ನಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಕ್ ಗಾರ್ಡನ್ ಉದ್ಘಾಟಿಸಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ಸೈನಿಕ ಶಾಲೆ ಪ್ರಾಂಶುಪಾಲ ಕೆ.ಟಿ.ಕರಮಚಂದನ್ ಹಾಗೂ ಇನ್ನಿತರ ಅಧಿಕಾರಗಳು ಹಾಜರಿದ್ದರು. ನಮ್ಮ ಸೈನಿಕ ಶಾಲೆಯ ಮಕ್ಕಳಲ್ಲಿ ಕೇವಲ ಅಕ್ಷರ ಏಕತೆಯನ್ನು ಬೀಜ ಬಿತ್ತದೇ ರಾಷ್ಟ್ರೀಯ ಏಕತೆ, ಸಮಗ್ರತೆ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದನ್ನೂ ಕಲಿಸಿಕೊಡಲಾಗುತ್ತದೆ. ಹಾಗೆಯೇ ಇತರರತ್ತ ಬೆರಳು ಮಾಡದೆ ತನ್ನ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂಥ ಶಿಕ್ಷಣ ನೀಡಲಾಗುತ್ತದೆ.-ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು.