ಸಾರಾಂಶ
ಕನಕಗಿರಿ:
ವಿವಿಧ ತಾಲೂಕು ಕಚೇರಿಗಳನ್ನು ಪಟ್ಟಣದಲ್ಲಿ ಆರಂಭಿಸುವಂತೆ ಒತ್ತಾಯಿಸಿ ಕಳೆದೆರೆಡು ದಿನಗಳಿಂದ ಎಸ್‌ಎಫ್‌ಐನಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಹಾಗೂ ಸಂಘಟಕರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯ ದೊಡ್ಡ ಬಸವರಾಜ ಗುಳೆದಾಳ, ತಾಲೂಕು ಕೇಂದ್ರವಾಗಿ ಎಂಟು ವರ್ಷ ಕಳೆದರೂ ಈ ವರೆಗೂ ಸರಿಯಾದ ಸರ್ಕಾರಿ ಕಚೇರಿಗಳನ್ನು ಪಟ್ಟಣದಲ್ಲಿ ತೆರೆದಿಲ್ಲ. ಈ ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಸರ್ಕಾರಿ ಕಚೇರಿ ತರುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಪಟ್ಟಣದಲ್ಲಿ ಆರಂಭಿಸಿಲ್ಲ. ಶಾಲೆಗೆ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ತಾಲೂಕಿನಲ್ಲಿ ಶಿಕ್ಷಣ ಕುಂಠಿತಗೊಳ್ಳಲು ಕಾರಣವಾಗಿದೆ
ಎಂದು ದೂರಿದರು.ನೂರಾರು ವಿದ್ಯಾರ್ಥಿಗಳೊಂದಿಗೆ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಸಂಘಟನೆಯ ಪದಾಧಿಕಾರಿಗಳು ಕೆಲಕಾಲ ಸಂಚಾರ ತಡೆದಿದ್ದರಿಂದ ಪ್ರತಿಭಟನಾಕಾರರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಉಂಟಾಯಿತು. ಬಳಿಕ ಹೋರಾಟಗಾರರು ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ನಮ್ಮ ಬೇಡಿಕೆ ಈಡೇರಿಸಬೇಕೆಂದು ಪಟ್ಟು ಹಿಡಿದರು. ವಾಗ್ವಾದ ತಿಳಿಗೊಂಡ ನಂತರ ಪ್ರತಿಭಟನಾ ಸ್ಥಳಕ್ಕೆ ಶಿರಸ್ತೇದಾರ ಅನಿತಾ ಇಂಡಿ, ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕ ವೆಂಕಟೇಶ ಗೋಡಿನಾಳ ಆಗಮಿಸಿ ಮನವಿ ಸ್ವೀಕರಿಸಿದರು. ಜು. 28ರಂದು ಎಲ್ಲ ತಾಲೂಕು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡುತ್ತಿದ್ದಂತೆ ಅನಿರ್ದಿಷ್ಟಾವಧಿ ಧರಣಿ ಹಿಂಪಡೆಯಲಾಯಿತು.ಈ ವೇಳೆ ಉಪಾಧ್ಯಕ್ಷ ಬಸವರಾಜ ಗುಳದಾಳ, ಜಿಲ್ಲಾ ಕಾರ್ಯದರ್ಶಿ ಶಿವು ಈಚನಾಳ, ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ, ಬಾಲಾಜಿ ಚಳ್ಳಾರಿ ಇದ್ದರು.ಕನಕಗಿರಿ ತಾಲೂಕಿನಲ್ಲಿ ಶಿಕ್ಷಕರು ಶಾಲೆಗೆ ಗೈರಾಗುತ್ತಿರುವುದರಿಂದ ಎಸ್ಎಸ್ಎಲ್‌ಸಿಯಲ್ಲಿ ನೂರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂತಹ ಶಿಕ್ಷಕರ ವಿರುದ್ಧ ಶಿಕ್ಷಣಾ ಇಲಾಖೆ ಶಿಸ್ತು ಕ್ರಮಕೈಗೊಳ್ಳಬೇಕು.ಶಿವಪ್ಪ, ಎಸ್ಎಫ್ಐ ರಾಜ್ಯಾಧ್ಯಕ್ಷ