ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಭಾನುವಾರ ಮುಧೋಳ ನಗರ ಪ್ರದಕ್ಷಿಣೆ ಹಾಕಿ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಯೋಜನೆ ಹಂತ -4ರ ಅಡಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ವೀಕ್ಷಿಸಿದರು.ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ ಅವರ ವಾರ್ಡಿನಲ್ಲಿಯೇ ಕ್ವಾಲಿಟಿ ವರ್ಕ್ ಆಗದಿರುವುದನ್ನು ಗಮನಿಸಿದ ಸಚಿವ ತಿಮ್ಮಾಪೂರ, ಗುತ್ತಿಗೆದಾರನ ಮೇಲೆ ಹರಿಹಾಯ್ದರಲ್ಲದೆ, ಅಧ್ಯಕ್ಷೆಯಾಗಿ ನಿವೇನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ನಗರಸಭೆ ಪೌರಾಯುಕ್ತರು, ಅಭಿಯಂತರನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ನಗರಸಭೆ ವಿವಿಧ ವಾರ್ಡ್ ಸದಸ್ಯರೊಂದಿಗೆ ಭೇಟಿ ನೀಡಿ ನಗರೋತ್ಥಾನ ಹಂತ 4ರ ಯೋಜನೆಯಲ್ಲಿ ನಡೆದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.
ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳ ಕುಂದು-ಕೊರತೆ ಆಲಿಸಿದ ಸಚಿವರು, ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ಮಹಿಳೆಯರು ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಲು ಆದಷ್ಟು ಬೇಗ ಶೌಚಾಲಯ ನಿರ್ಮಿಸಿಕೊಡುವಂತೆ ತಿಳಿಸಿದ ಅವರು, ಮಹಿಳೆಯರ ಮಾನ ಮರ್ಯಾದೆ ಕಾಪಾಡುವುದು ನಗರಸಭೆಯ ಆದ್ಯತೆಯಾಗಬೇಕೆಂದು ಒತ್ತಿ ಹೇಳಿದರು.ನಗರೋತ್ಥಾನ ಕಾಮಗಾರಿಯಲ್ಲಿ ಅಲ್ಲಲ್ಲಿ ಕಳಪೆ ಕೆಲಸಗಳು ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಚಿವರು, ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ನಗರದ ಸೌಂದರ್ಯೀಕರಣಕ್ಕಾಗಿ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸಲು ಈಗಾಗಲೇ ನೋಟಿಸ್ ನೀಡಲಾಗಿದ್ದು, ಸ್ವಯಂಪ್ರೇರಿತರಾಗಿ ತೆರವುಗೊಳಿಸದಿದ್ದರೆ ಜೆಸಿಬಿ ಬಳಸಿ ನೆಲಸಮ ಮಾಡಬೇಕು, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.ಬಿ ಖಾತೆ ಹಾವಳಿಗೆ ಕಡಿವಾಣ: ಬಿ ಖಾತೆ ಮಾಡಿಸಿಕೊಡಲು ಏಜೆಂಟರ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು ಇದಕ್ಕೆ ಕಡಿವಾಣ ಹಾಕದಿದ್ದರೆ ಸಂಬಂಧಿಸಿದವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು. ಬಿ ಖಾತೆ ಮಾಡುವ ಸಂಬಂಧ ನಗರಸಭೆಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಏಜೆಂಟರ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ತಮ್ಮ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಅಡ್ಡದಾರಿ ಹಿಡಿದರೆ ತಕ್ಷಣವೇ ಅಮಾನತುಗೊಳಿಸಲು ಮೇಲಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಅಧ್ಯಕ್ಷೆ ಸುನಂದ ತೇಲಿ, ಕಾಂಗ್ರೆಸ್ ಮುಖಂಡರಾದ ದಾನೇಶ ತಡಸಲೂರ, ಎಸ್.ಪಿ. ದಾನಪ್ಪಗೋಳ, ಸಂತೋಷ ಪಾಲೋಜಿ, ಅಶೋಕ ಗವರೋಜಿ, ಸತೀಶ ಮಲಘಾನ, ಭೀಮಸಿ ಮೇತ್ರಿ, ಸುರೇಶ ಕಾಂಬಳೆ, ಪುಂಡಲೀಕ ಭೋವಿ, ಬಸು ಬಳಿಗಾರ, ರಫೀಕ್ ಜಮಾದಾರ, ಹನುಮಂತ ತೇಲಿ, ಸಿದ್ರಾಮ್ ಕುರಿ, ರಾಘು ಮೋಕಾಶಿ, ಪೌರಾಯುಕ್ತ ಗೋಪಾಲ, ಅಭಿಯಂತರರಾದ ಮಲ್ಲಪ್ಪ ಹೊಸೂರ, ರಾಜು ಚವ್ಹಾಣ ಸೇರಿದಂತೆ ಇತರರು ಇದ್ದರು.ನಗರಸಭೆ ಸದಸ್ಯರು ಮನವಿ ಮಾಡಿದರೆ ಉತಾರ ನೀಡಲು ಎರಡು ತಿಂಗಳು ತೆಗೆದುಕೊಳ್ಳುತ್ತಾರೆ, ಆದರತೆ ಏಜೆಂಟರು ಎರಡು ದಿನಗಳಲ್ಲಿ ನೀಡುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ಸಿಬ್ಬಂದಿ ಹಣದಾಸೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಸಾರ್ವಜನಿಕರು ತಮ್ಮ ಬಗ್ಗೆ ತಪ್ಪು ತಿಳಿದರೂ ಪರವಾಗಿಲ್ಲ, ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ.
-ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು