ಸಾರಾಂಶ
ಎಂಜಿನಿಯರಿಂಗ್ ಎಲ್ಲ ಕೋರ್ಸುಗಳಲ್ಲಿ ಭವಿಷ್ಯದೆ. ಆದರೆ, ಆ ಕ್ಷೇತ್ರಗಳಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಪೂರಕವಾದ ಕೌಶಲ್ಯ, ತಾಂತ್ರಿಕ ತರಬೇತಿ ಪಡೆಯಲು ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಂಜಿನಿಯರಿಂಗ್ ವ್ಯಾಸಂಗದಲ್ಲಿ ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾತ್ರವಲ್ಲ ಇನ್ನಿತರೆ ಕೋರ್ಸುಗಳಿಗೂ ಭವಿಷ್ಯ ಚೆನ್ನಾಗಿಯೇ ಇದೆ. ಆದರೆ, ಆ ಕ್ಷೇತ್ರಗಳಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಪೂರಕವಾದ ಕೌಶಲ್ಯ, ತಾಂತ್ರಿಕ ತರಬೇತಿ ಪಡೆಯಲು ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಜಾಜ್ ಕಂಪನಿ ಪಿಇಎಸ್ ಕ್ಯಾಂಪಸ್‌ನಲ್ಲಿ ಆರಂಭಿಸಲಾಗಿರುವ ‘ಬಜಾಜ್ ಎಂಜಿನಿಯರಿಂಗ್ ಸ್ಕಿಲ್ಸ್ ಟ್ರೈನಿಂಗ್ ’ (ಬೆಸ್ಟ್) ಸ್ಕಿಲ್ ಲ್ಯಾಬ್‌ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬಿಇ ವ್ಯಾಸಂಗ ಮಾಡಲು ಬರುವ ಬಹುತೇಕ ವಿದ್ಯಾರ್ಥಿಗಳು ಬರೀ ಕಂಪ್ಯೂಟರ್ ಸೈನ್ಸ್, ಎಐನಂತಹ ಕೆಲವೇ ಕೋರ್ಸುಗಳಿಗೆ ಮುಗಿಬೀಳುತ್ತಿದ್ದಾರೆ. ಇದರ ಪರಿಣಾಮ ಹಲವು ಎಂಜಿನಿಯರಿಂಗ್ ಕಾಲೇಜುಗಳು ಮೆಕ್ಯಾನಿಕಲ್, ಸಿವಿಲ್ ಮತ್ತು ಆಟೊಮೋಮೊಬೈಲ್ಸ್ ಕೋರ್ಸ್‌ಗಳಿಗೆ ಬೇಡಿಕೆ ಇಲ್ಲದೆ ನಿಲ್ಲಿಸುತ್ತಿವೆ. ಆದರೆ, ಈ ಕೋರ್ಸ್‌ಗಳಿಗೂ ಭವಿಷ್ಯ ಚೆನ್ನಾಗೇ ಇದೆ. ಇದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ ಕಟ್ಟಡ ನಿರ್ಮಾಣ, ವಾಹನಗಳ ತಯಾರಿಕೆ, ಅವುಗಳ ಬಿಡಿ ಭಾಗಗಳ ತಯಾರಿ, ರಿಪೇರಿ ಇವು ಜಾಗತಿಕವಾಗಿ ಯಾವ ಕಾಲಕ್ಕೂ ನಿಂತಿಲ್ಲ, ನಿಲ್ಲುವುದೂ ಇಲ್ಲ. ಆದರೆ, ಕಾಲ ಕಾಲಕ್ಕೆ ತಾಂತ್ರಿಕತೆಯಲ್ಲಿ ಸುಧಾರಣೆಯಾಗುತ್ತಾ ಹೋಗುತ್ತದೆ. ಅದಕ್ಕನುಗುಣವಾಗಿ ವಿದ್ಯಾರ್ಥಿಗಳು ಕೌಶಲ್ಯ, ತಾಂತ್ರಿಕ ತರಬೇತಿ ಪಡೆಯಬೇಕು. ಈ ವಿಚಾರದಲ್ಲಿ ಉದ್ಯಮಗಳೂ ಮುಂದೆ ಬಂದು ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ವಿವಿಯ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ಸಿಎಸ್‌ಆರ್ ಅನುದಾನದಡಿ ಬೆಸ್ಟ್ ಲ್ಯಾಬ್ ಸ್ಥಾಪನೆಯ ಮೂಲಕ ಬಜಾಜ್ ಕಂಪನಿಯು ಒಂದು ಟ್ರೆಂಡ್ ಹುಟ್ಟುಹಾಕಿದೆ. ಇದಕ್ಕಾಗಿ ಬಜಾಜ್‌ನ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಇದೇ ರೀತಿ ರಾಜ್ಯದ ಎಲ್ಲ ಕಂಪನಿಗಳು, ಉದ್ಯಮಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಇಂತಹ ಕೇಂದ್ರಗಳನ್ನು ತೆರೆದು ಇಂದಿನ ಉದ್ಯಮಗಳಲ್ಲಿ ಬೇಡಿಕೆ ಇರುವ ಕೌಶಲ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ನಮ್ಮ ವಿದ್ಯಾರ್ಥಿಗಳಿಗೆ ದೊರೆಯುತ್ತವೆ ಎಂದು ಪ್ರತಿಪಾದಿಸಿದರು.
ಬಜಾಜ್ ಆಟೋ ಲಿಮಿಟೆಡ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರವಿಕಿರಣ್, ಸಿಎಸ್‌ಆರ್ ಯೋಜನೆಗಳ ಉಪಾಧ್ಯಕ್ಷ ಸುಧಾಕರ್ ಗುಡಿಪಾಟಿ ಮಾತನಾಡಿದರು. ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ನಿರಂಜನ್, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಚಂದ್ರಶೇಖರ್, ಪಿಇಎಸ್ ವಿವಿಯ ಸಮ ಕುಲಾಧಿಪತಿ ಡಾ.ಡಿ. ಜವಹಾರ್, ಕುಲಪತಿ ಡಾ.ಸೂರ್ಯ ಪ್ರಸಾದ್, ಸಮ ಕುಲಪತಿ ಡಾ.ನಾಗಾರ್ಜುನ ಸಾದಿನೇನಿ, ಕುಲಸಚಿವ ಡಾ.ಕೆ.ಎಸ್.ಶ್ರೀಧರ್, ಮುಖ್ಯ ಕಾರ್ಯಪಾಲನಾ ಅಧಿಕಾರಿ ಪ್ರೊ.ಅಜೋಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.