ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಚಿವ ತಿಮ್ಮಾಪೂರ ತೇಜೋವಧೆ ಖಂಡಿಸಿ ಹಾಗೂ ರಾಜ್ಯ ಲಿಕ್ಕರ್ ಅಸೋಸಿಯೇಷನ್ ವಿರುದ್ಧ ಸಚಿವ ಆರ್.ಬಿ.ತಿಮ್ಮಾಪೂರ ಅಭಿಮಾನಿ ಬಳಗದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು.ನಗರಸಭೆ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ಬ್ಯಾಂಕ್, ಎಸ್ಪಿ ಕಚೇರಿ, ಅಗ್ನಿ ಶಾಮಕ ದಳ, ಬಸ್ ನಿಲ್ದಾಣ ರಸ್ತೆ ಮೂಲಕ ಹಾಯ್ದು ಜಿಲ್ಲಾಡಳಿತ ಭವನ ಮುಖ್ಯದ್ವಾರ ತಲುಪಿತು. ನಂತರ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿ ಬಳಗದವರು ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ, ಪದಾಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಅಕ್ರಮ ಮದ್ಯಕೋರರ ಮೇಲೆ ಕ್ರಮಕ್ಕೆ ಆರ್.ಬಿ.ತಿಮ್ಮಾಪುರ ಮುಂದಾಗಿದ್ದಾರೆ. ಲಿಕ್ಕರ್ ಮಾಫಿಯಾ ತಡೆಗಟ್ಟಲು ಸಚಿವ ಆರ್.ಬಿ.ತಿಮ್ಮಾಪೂರ ಶ್ರಮಿಸುತ್ತಿದ್ದಾರೆ. ಇದರಿಂದ ನೊಂದುಕೊಂಡು ಕೆಲವರು ಆರ್.ಬಿ.ತಿಮ್ಮಾಪುರ ವಿರುದ್ಧ ಷಡ್ಯಂತ ರೂಪಿಸುತ್ತಿದ್ದಾರೆ. ಇದಕ್ಕೆ ಜಗುವುದಿಲ್ಲ. ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡ ಪೀರಪ್ಪ ಮ್ಯಾಗೇರಿ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪುರ ವರ್ಗಾವಣೆ ದಂಧೆ ಮಾಡಿಲ್ಲ. ಒಬ್ಬ ಅಧಿಕಾರಿಯನ್ನು ಎತ್ತಂಗಡಿ ಮಾಡಿಲ್ಲ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ. ಇದನ್ನು ತಿರುಚಿ ಬಿಜೆಪಿಗರು ಹಾಗೂ ಲಿಕ್ಕರ್ ಅಸೋಸಿಯೇಷನ್‌ನ ಕೆಲವು ಪದಾಧಿಕಾರಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.ಮಹಾರಾಷ್ಟ್ರದ ಚುನಾವಣೆಗೆ ₹700 ಬಳಕೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡುತ್ತಿರುವುದು ನಾಚಿಗೇಡಿನ ಸಂಗತಿ. ಮುಖ್ಯವಾಗಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ತಿಂದು ತೇಗಿದ ಬಿಜೆಪಿ ನಾಯಕರ ಬಗ್ಗೆ ತುಟಿ ಪಿಟಿಕ್ ಎನ್ನದ ಮೋದಿ, ಇಂದು ದಲಿತ ನಾಯಕರ ಬಗ್ಗೆ ಮಾತನಾಡುತ್ತಿರುವುದು ಅವಮಾನಕರ ಸಂಗತಿಯಾಗಿದೆ. ಕೂಡಲೇ ಆರೋಪ ಹಿಂಪಡೆಯಬೇಕು. ಇಲ್ಲವೇ ಆರೋಪ ಸಾಬೀತು ಮಾಡಬೇಕು. ಸಿದ್ದರಾಮಯ್ಯ ಅವರು ಹೇಳಿದಂತೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸವಾಲು ಹಾಕಿದರು.ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಬದ್ಧತೆ ಆಡಳಿತ ನೀಡುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಯಶಸ್ವಿ ಆಗಿದ್ದಾರೆ. ಇದನ್ನು ಸಹಿಸದೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಟೀಂ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದರು.ಈ ವೇಳೆ ತೌಸೀಪ್ ಪಾರತನಳ್ಳಿ, ವೈ.ವೈ.ತಿಮ್ಮಾಪೂರ, ರಾಜು ಮನ್ನಿಕೇರಿ, ಗೋವಿಂದ ಕವಲಗಿ, ರಾಜು ಮೇಲನಕೇರಿ ಅನೇಕ ಜನರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಜತೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಆರ್.ಬಿ.ತಿಮ್ಮಾಪೂರ ಅವರು ಕೂಡ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ವಿಪಕ್ಷಗಳ ನಾಯಕರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತೇಜೋವಧೆ ಮಾಡಲು ಮುಂದಾಗಿದ್ದಾರೆ.- ರಕ್ಷಿತಾ ಈಟಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ
ಲಿಕ್ಕರ್ ಮಾಫಿಯಾ ತಡೆಗಟ್ಟಲು ಸಚಿವ ಆರ್.ಬಿ.ತಿಮ್ಮಾಪೂರ ಶ್ರಮಿಸುತ್ತಿದ್ದಾರೆ. ಇದರಿಂದ ನೊಂದುಕೊಂಡು ಕೆಲವರು ಆರ್.ಬಿ.ತಿಮ್ಮಾಪುರ ವಿರುದ್ಧ ಷಡ್ಯಂತ ರೂಪಿಸುತ್ತಿದ್ದಾರೆ. ಇದಕ್ಕೆ ಜಗುವುದಿಲ್ಲ. ಬಗ್ಗುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ.
- ಶಿವಾನಂದ ಉದಪುಡಿ, ಅಭಿಮಾನಿ ಬಳಗದ ಅಧ್ಯಕ್ಷರು.