ರಾಜ್ಯದಲ್ಲೇ ಪ್ರಥಮ ಬಾರಿ 100 ಕ್ಯಾಂಟೀನ್‌ಗೆ ಸಚಿವ ತಿಮ್ಮಾಪೂರ ಚಾಲನೆ

| Published : Jan 27 2025, 12:46 AM IST

ಸಾರಾಂಶ

ಏಕ ಕಾಲದಲ್ಲಿ ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 100 ಸಂಜೀವಿನಿ ಕ್ಯಾಂಟೀನ್ ಪ್ರಾರಂಭಿಸಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಏಕ ಕಾಲದಲ್ಲಿ ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 100 ಸಂಜೀವಿನಿ ಕ್ಯಾಂಟೀನ್ ಪ್ರಾರಂಭಿಸಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಕ್ಯಾಂಟೀನ್ ಸಹಕಾರಿಯಾಗಲಿದೆ. ಇತರೆ ಮಹಿಳಾ ಸಂಘದವರು ಸ್ವ-ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಏಕ ಕಾಲದಲ್ಲಿ ಒಟ್ಟು 100 ಸಹೋದರಿ ಸಂಜೀವಿನಿ ಕ್ಯಾಂಟೀನಗಳಿಗೆ ಸಚಿವ ತಿಮ್ಮಾಪೂರ ಚಾಲನೆ ನೀಡಿ, ಮಾತನಾಡಿದ ಅವರು, ಎನ್ಆರ್‌ಎಲ್ಎಂ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳೇ ನಿರ್ವಹಿಸುತ್ತಿರುವ ಉತ್ತಮ ಗುಣಮಟ್ಟದ ಆಹಾರ ಹಾಗೂ ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಧೋಳ ಹಾಗೂ ಜಮಖಂಡಿ ತಾಲೂಕಿನಲ್ಲಿ ₹22.40 ಲಕ್ಷದಲ್ಲಿ 2 ಅಕ್ಕ ಕೆಫೆ ತೆರೆಯುತ್ತಿರುವುದು ಸಹ ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಎನ್ಆರ್‌ಎಲ್ಎಂ ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಮೂಲಕ ಸಹೋದರಿ ಸಂಜೀವಿನ ಕ್ಯಾಂಟೀನ್ ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಬಾದಾಮಿ ತಾಲೂಕಿನಲ್ಲಿ 12, ಬಾಗಲಕೋಟೆ ತಾಲೂಕಿನಲ್ಲಿ 15, ಬೀಳಗಿ 12, ಗುಳೇದಗಡ್ಡ 8, ಹುನಗುಂದ 12, ಇಲಕಲ್ಲ 10, ಜಮಖಂಡಿ 14, ಮುಧೋಳ 14 ಹಾಗೂ ರಬಕವಿ-ಬನಹಟ್ಟಿಯಲ್ಲಿ 7 ಕ್ಯಾಂಟಿನ್ ಪ್ರಾರಂಭಿಸಲಾಗಿದೆ. ಜಮಖಂಡಿ, ಮುಧೋಳದಲ್ಲಿ ತಲಾ ಒಂದು ಅಕ್ಕ ಕೆಫೆ ಶುರುವಾಗಿದೆ ಎಂದು ತಿಳಿಸಿದರು.

ಆಹಾರೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪ್ರತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ₹40 ಸಾವಿರ ನಂತೆ ಇಲ್ಲಿಯವರೆಗೆ 450 ಫಲಾನುಭವಿಗಳಿಗೆ ₹180.00 ಲಕ್ಷಗಳ ಬೀಜಧನ (ಪಿಎಂಎಫ್ಎಂಇ) ಆಹಾರೋತ್ಪನ್ನ ಚಟುವಟಿಕೆಗಳಿಗಾಗಿ ಸಾಲ ನೀಡಲಾಗಿದೆ. ಅಲ್ಲದೇ ಜಿಲ್ಲೆಯ 800 ಗ್ರಾಮೀಣ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಸ್ವ-ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿರಿದ್ದರು.