ಸಚಿವ ತಿಮ್ಮಾಪೂರ, ಶಾಸಕ ಜೆಟಿಪಿ ಒತ್ತಾಸೆಯಂತೆ ನೀರು

| Published : Mar 30 2024, 12:45 AM IST

ಸಾರಾಂಶ

ಬೀಳಗಿ: ಘಟಪ್ರಭಾ ನದಿ ದಂಡೆಯ ಗ್ರಾಮಗಳ ಜನ - ಜಾನುವಾರುಗಳಿಗೆ ಕುಡಿಯಲು ಹಿಡಕಲ್ ಜಲಾಶಯದಿಂದ ನೀರು ಬಿಡುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದ್ದರಿಂದ ಏ.1 ರಂದು ಸಾಯಂಕಾಲ 6 ಗಂಟೆಯಿಂದ ನೀರು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ ಎಂದು ಶಾಸಕ ಜೆ. ಟಿ. ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಘಟಪ್ರಭಾ ನದಿ ದಂಡೆಯ ಗ್ರಾಮಗಳ ಜನ - ಜಾನುವಾರುಗಳಿಗೆ ಕುಡಿಯಲು ಹಿಡಕಲ್ ಜಲಾಶಯದಿಂದ ನೀರು ಬಿಡುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದ್ದರಿಂದ ಏ.1 ರಂದು ಸಾಯಂಕಾಲ 6 ಗಂಟೆಯಿಂದ ನೀರು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ ಎಂದು ಶಾಸಕ ಜೆ. ಟಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಶಾಸಕರು, ನನ್ನ ಮೇರೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಬಿ. ತಿಮ್ಮಾಪೂರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಬಿಡಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಘಟಪ್ರಭಾ ನದಿ ಹಾಗೂ ಬ್ಯಾರೇಜ್‌ಗಳು ಸಂಪೂರ್ಣವಾಗಿ ಬತ್ತಿದ್ದು, ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಕೊಳವೆ ಬಾವಿಗಳು ನದಿ ದಂಡೆಯಲಿವೆ. ಅವುಗಳು ಸಹ ಬತ್ತಿ ಹೋಗುತ್ತಿವೆ. ಜನರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತಿರುವುದರಿಂದ ಕೂಡಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಆನದಿನ್ನಿ-ಬನ್ನಿದಿನ್ನಿ ಬ್ಯಾರೇಜ್ ತುಂಬುವವರೆಗೂ ನೀರನ್ನು ಹರಿಸಬೇಕೆಂದು ಶಾಸಕ ಪಾಟೀಲ ಒತ್ತಾಯಿಸಿದ್ದರು. ಅದರಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿ ನೀರು ಬಿಡುಗಡೆಗೆ ಆದೇಶ ನೀಡಿದ್ದಾರೆ.

ಹಿಡಕಲ್ ಜಲಾಶಯದಿಂದ ಬಿಡುಗಡೆಗೊಳಿಸಲಾದ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸತಕ್ಕದ್ದಲ್ಲ. ನದಿಗೆ ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿ ಸದುಪಯೋಗದ ಕುರಿತು ಸೂಕ್ತ ನಿಗಾವಹಿಬೇಕು. ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ನದಿಗೆ ತಾಗಿದಂತೆ ಅಳವಡಿಸಿರುವ ರೈತರ ವಿದ್ಯುತ್ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಲು ಮತ್ತು ಸೋಲಾರ ಆಧಾರಿತ ಮೋಟಾರ್, ಜನರೇಟ್‌ಗಳ ಸಂಪರ್ಕ ಕಡಿತಗೊಳಿಸಲು ಹೆಸ್ಕಾಂ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ ಎಂದು ಶಾಸಕ ಜೆ ಟಿ ಪಾಟೀಲ ತಿಳಿಸಿದ್ದಾರೆ.