ಕನ್ನಡಪ್ರಭ ವಾರ್ತೆ ಆಲೂರು

ಮೆಕ್ಕೆಜೋಳ ಬೆಳೆಗೆ ವ್ಯಾಪಕವಾಗಿ ಬಿಳಿ ಸುಳಿ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತ್ವರಿತವಾಗಿ ಪರಿಹಾರ ವಿತರಿಸಬೇಕು ಎಂದು ನಿರ್ದೇಶನ ನೀಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆಗೆ ಬಿಳಿ ಸುಳಿ (ವೈಟ್ ಬಡ್/ವೈರಲ್) ರೋಗ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಗುರುವಾರ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು. ರೈತರ ಅಹವಾಲುಗಳನ್ನು ಆಲಿಸಿದ ಸಚಿವರು, ಬೆಳೆ ನಷ್ಟದ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಪರಿಹಾರ ವಿತರಣೆಯಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯ ನಡೆಯಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಬೆಳೆ ಪರಿಹಾರದ ವಿಷಯದಲ್ಲಿ ಅನಗತ್ಯ ಕಾನೂನು, ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ರೈತರನ್ನು ಅಲೆದಾಡಿಸಬೇಡಿ. ಸರ್ಕಾರ ರೈತರೊಂದಿಗೆ ಇದೆ. ಅರ್ಹ ರೈತರಿಗೆ ಶೀಘ್ರದಲ್ಲೇ ಪರಿಹಾರ ತಲುಪಬೇಕು " ಎಂದು ಹೇಳಿದರು. ವಿಶೇಷ ಪರಿಷ್ಕರಣೆ ಯೋಜನೆಯಡಿ ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಬೆಳೆ ವಿಮೆ ಪಾವತಿಸಿರುವ ರೈತರಿಗೆ ನಿಯಮಾನುಸಾರ ಶೇ.25ರಷ್ಟು ಮಧ್ಯಂತರ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಿಖರ ಮಾಹಿತಿ ದಾಖಲಿಸಬೇಕು. ರೈತರಿಗೆ ಯಾವುದೇ ರೀತಿಯ ಮೋಸ ಅಥವಾ ಅನ್ಯಾಯವಾಗದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಮೆಕ್ಕೆಜೋಳ ಬೀಜ ಹಾಗೂ ರೋಗದ ಸಮಸ್ಯೆ ಕುರಿತು ಸಂಬಂಧಿಸಿದ ಕಂಪನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ರೈತರಿಗೆ ನಷ್ಟ ಉಂಟಾಗಲು ಕಾರಣವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದೇ ವೇಳೆ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಸಂಬಂಧಿತ ಇಲಾಖೆಗಳ ಎಲ್ಲಾ ಅಧಿಕಾರಿಗಳನ್ನು ತುರ್ತು ಸಭೆಗೆ ಕರೆಯಿಸಿ, ಬೆಳೆ ಹಾನಿ, ಪರಿಹಾರ ವಿತರಣೆ ಹಾಗೂ ಮುಂದಿನ ಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಸುವಂತೆ ಸೂಚಿಸಿದರು.


ಮೆಕ್ಕೆಜೋಳ ಬೆಳೆಗೆ ತಗುಲಿರುವ ರೋಗಬಾಧಿತ ಮೇವನ್ನು ಜಾನುವಾರುಗಳಿಗೆ ಆಹಾರವಾಗಿ ನೀಡದಂತೆ ರೈತರಿಗೆ ಸಲಹೆ ನೀಡಿದ ಸಚಿವರು, ಇದರಿಂದ ದನಕರುಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಸಚಿವರ ಭೇಟಿ ವೇಳೆ ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದು, ಬೆಳೆ ಹಾನಿಯ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಎಂ ಪಟೇಲ್ ಶಾಸಕ ಸಿಮೆಂಟ್ ಮಂಜುನಾಥ್ ಸಕಲೇಶಪುರ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮುರುಳಿ ಮೋಹನ್ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಪೃಥ್ವಿ ಜಯರಾಮ್ ಜಿಲ್ಲಾಧಿಕಾರಿ ಲತಾಕುಮಾರಿ ಎಸ್‌ಪಿ ಶುಭನ್ವಿತಾ ತಹಸೀಲ್ದಾರ್‌ ಮಲ್ಲಿಕಾರ್ಜುನ್ ಕೃಷಿ ಇಲಾಖೆ ಅಧಿಕಾರಿ ಸೇರಿದಂತೆ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.