ಸಾರಾಂಶ
ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಅವರಿಗೆ ಸ್ಕೂಟಿ ನೀಡಿದರು.
ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಯುಸಿ ಟಾಪರ್ಸ್‌ಗಳಿಗೆ ವೈಯಕ್ತಿಕವಾಗಿ ಸ್ಕೂಟಿ ನೀಡಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರೋತ್ಸಾಹಿಸಿದರು.
ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಅವರಿಗೆ ಸ್ಕೂಟಿ ನೀಡಿದರು. ಜೊತೆಗೆ ಈ ವಿದ್ಯಾರ್ಥಿನಿಗೆ ₹1ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಸಚಿವರು ಕಾರ್ಯಕ್ರಮದಲ್ಲಿ ಘೋಷಿಸಿದರು.40 ಟಾಪರ್ಸ್‌ಗೆ ದ್ವಿಚಕ್ರ ವಾಹನ:
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ಹೆಚ್ಚು ಅಂಕಗಳನ್ನು ಗಳಿಸಿದ ರಾಜ್ಯದ 40 ಟಾಪರ್ಸ್ ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ ದ್ವಿಚಕ್ರ ವಾಹನ ನೀಡುವ ಮೂಲಕ ಪ್ರೋತ್ಸಾಹಿಸಿದರು.ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಪಿಯುಸಿಯ ವಿಜಯನಗರ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಚಿವರು ಸ್ಕೂಟಿ ನೀಡಿ, ಸ್ಕೂಟಿಯಲ್ಲಿ ವಿದ್ಯಾರ್ಥಿನಿಯನ್ನು ಕೂರಿಸಿಕೊಂಡು ಒಂದು ಸುತ್ತು ಖುದ್ದಾಗಿ ವಾಹನ ಚಲಾಯಿಸುವುದರ ಮೂಲಕ ಈ ದ್ವಿಚಕ್ರ ವಾಹನ ವಿತರಣೆಗೆ ಚಾಲನೆ ನೀಡಿದರು.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಬಹುಮಾನ ಪಡೆದ ವಿದ್ಯಾರ್ಥಿನಿಯ ಸ್ಕೂಟಿಯನ್ನು ಸ್ವತಃ ಚಾಲನೆ ಮಾಡಿದರು.