ಹಂಪಿಯಲ್ಲಿ ವಸ್ತು ಪ್ರದರ್ಶನಕ್ಕೆ ಸಚಿವ ಜಮೀರ್‌ ಚಾಲನೆ

| Published : Mar 01 2025, 01:03 AM IST

ಸಾರಾಂಶ

ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀ‌ರ್ ಅಹಮದ್‌ ಖಾನ್ ಚಾಲನೆ ನೀಡಿದರು.

ಹಂಪಿ: ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀ‌ರ್ ಅಹಮದ್‌ ಖಾನ್ ಚಾಲನೆ ನೀಡಿದರು.

ವಸ್ತು ಪ್ರದರ್ಶನದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಹಿಳೆಯರೊಂದಿಗೆ ಕೂತು ಬೀಸುಕಲ್ಲಿನಲ್ಲಿ ಧಾನ್ಯಗಳನ್ನು ಬೀಸಿದರು. ಒಕ್ಕಣೆಯಲ್ಲಿ ಒನಕೆ ಹಿಡಿದು ಕಾಳು ಒಪ್ಪ ಮಾಡಿದರು. ಹಳ್ಳಿ ಮನೆ ಮುಂದಿನ ಬಾವಿಯಲ್ಲಿ ನೀರು ಸೇದಿದರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಸಾಥ್‌ ನೀಡಿದರು.

ಆನಂತರ ಕುರುವತ್ತಿ ಬಸವೇಶ್ವರ ಪ್ರತಿಕೃತಿ, ಸಿರಿಧಾನ್ಯಗಳಿಂದ ನಿರ್ಮಿಸಲಾಗಿರುವ ನೇಗಿಲು ಹಿಡಿದ ರೈತ ಹಾಗೂ ಕೃಷಿ ಇಲಾಖೆಯ ಮುಖ್ಯ ಯೋಜನೆಗಳನ್ನು ವೀಕ್ಷಿಸಿದರು. ಈ ವೇಳೆ ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮತ್ತಿತರರಿದ್ದರು.

95 ಮೀನು ತಳಿಗಳ ಆಕರ್ಷಕ ಪ್ರದರ್ಶನ: ಗತವೈಭವ ಸಾರುವ ಹಂಪಿ ಉತ್ಸವದ ಮತ್ಸ್ಯ ಮೇಳದಲ್ಲಿ 95 ಬಗೆಯ ಮೀನುಗಳ ಪ್ರದರ್ಶನ ಮಾಡಲಾಗಿತ್ತು. 10 ವಿವಿಧ ಬಗೆಯ ಸಮುದ್ರ ಮೀನುಗಳು ಆಕರ್ಷಕವಾಗಿದ್ದವು.

ಪಂಜರ ಮೀನು ಕೃಷಿ, ಮೀನು ಮಾರಲು ಮೀನು ಮಾರಾಟಗಾರರಿಗೆ ನೀಡುವ ವಾಹನ ಪ್ರದರ್ಶನ, ಸುರಂಗ ಮತ್ಸ್ಯಾಲಯ ಹೀಗೆ ವಿವಿಧ ಹಾಗೂ ಬಣ್ಣ ಬಣ್ಣಗಳ ಆಕರ್ಷಕ ಮೀನುಗಳು ಕಣ್ಮನ ಸೆಳೆಯುತ್ತವೆ.

ಆಹಾರ ಮೇಳ: ಆಹಾರ ಮೇಳದಲ್ಲಿ ಉತ್ತರ ಕರ್ನಾಟಕದ ಕಡಕ್‌ ರೊಟ್ಟಿ, ಚಟ್ನಿಪುಡಿ ಜನರ ಗಮನ ಸೆಳೆದಿದ್ದು, ಅನೇಕರು ಕಡಕ್‌ ರೊಟ್ಟಿ ಸವಿದರು. ಸಿರಿಧಾನ್ಯ ಆಹಾರ ಘಮ ಘಮಿಸುತ್ತಿದ್ದವು.

ಮತ್ಸ್ಯಮೇಳವನ್ನು ಸಚಿವ ಜಮೀರ ಅಹ್ಮದ್‌ ಉದ್ಘಾಟಿಸಿದರು. ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಜಿಪಂ ಸಿಇಒ ನೋಂಗ್ಜಾಯ್‌ ಮೊಹಮ್ಮದ್‌ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಉಪಸ್ಥಿತರಿದ್ದರು.