ಸಚಿವ ಜಮೀರ್‌ ಪುತ್ರನ ಸಿನಿಮಾ ತಂಡದಿಂದ ಹಂಪಿ ಸ್ನಾನಘಟ್ಟದ ಎದುರು ಬದಿ ನದಿ ತೀರದಲ್ಲಿ ಬೆಂಕಿ

| N/A | Published : Jan 31 2025, 12:47 AM IST / Updated: Jan 31 2025, 11:32 AM IST

ಸಚಿವ ಜಮೀರ್‌ ಪುತ್ರನ ಸಿನಿಮಾ ತಂಡದಿಂದ ಹಂಪಿ ಸ್ನಾನಘಟ್ಟದ ಎದುರು ಬದಿ ನದಿ ತೀರದಲ್ಲಿ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿಯ ಸ್ನಾನಘಟ್ಟದ ಎದುರು ಬದಿಯ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್‌ ನಡೆಸಲಾಗಿದೆ

ಹೊಸಪೇಟೆ: ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹ್ಮದ್ ಖಾನ್‌ ಪುತ್ರ ಜೈದ್‌ ಖಾನ್‌ ನಟನೆಯ ಕಲ್ಟ್‌ ಚಿತ್ರದ ಶೂಟಿಂಗ್‌ ವೇಳೆ ಬುಧವಾರ ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿ ಚಿತ್ರೀಕರಣ ಮಾಡಲಾಗಿದೆ.

ಹಂಪಿಯ ಸ್ನಾನಘಟ್ಟದ ಎದುರು ಬದಿಯ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್‌ ನಡೆಸಲಾಗಿದೆ. ತುಂಗಭದ್ರಾ ನದಿ ತೀರದಲ್ಲಿ ಅಪರೂಪದ ನೀರುನಾಯಿಗಳು ಇರುತ್ತವೆ. ಹಾಗಾಗಿ ಇದನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಈಗ ಈ ಪ್ರದೇಶದಲ್ಲೇ ಚಿತ್ರ ತಂಡ ಬೆಂಕಿ ಹಾಕಿ ಶೂಟಿಂಗ್‌ ನಡೆಸಿದ್ದು, ಅರಣ್ಯ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಸುಮ್ಮನಾಗಿರುವ ಬಗ್ಗೆ ಈಗ ವನ್ಯಜೀವಿ ಪ್ರೇಮಿಗಳು ಹಾಗೂ ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರ ತಂಡ ಬೆಂಕಿ ಹಾಕಿ ಶೂಟಿಂಗ್‌ ನಡೆಸಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಂಪಿಯಲ್ಲಿ ಬುಧವಾರ ಶೂಟಿಂಗ್‌ನಲ್ಲಿ ನಟಿ ರಚಿತಾರಾಮ್‌ ಭಾಗವಹಿಸಿದ್ದರು. ಆದರೆ ಸಚಿವರ ಪುತ್ರ, ನಟ ಜೈದ್‌ ಖಾನ್‌ ಶೂಟಿಂಗ್‌ಗೆ ಬಂದಿರಲಿಲ್ಲ.

ಫೈರ್‌ ಕ್ಯಾಂಪ್‌ ಆತಂಕ:

ಈ ಹಿಂದೆ ನದಿಪಾತ್ರದಲ್ಲಿ ಜೀವ ವೈವಿಧ್ಯ ಒಣಗುತ್ತಿದೆ ಎಂಬುದನ್ನು ಮನಗಂಡು ಆಂಧ್ರಪ್ರದೇಶ, ಕರ್ನಾಟಕ ಸರ್ಕಾರಗಳು ತುಂಗಭದ್ರಾ ಮಂಡಳಿಯಿಂದ ನೀರು ಬಿಡಿಸಿ, ಜೀವವೈವಿಧ್ಯ ಉಳಿಸುವ ಕಾರ್ಯ ಮಾಡಿತ್ತು. ಈಗ ನೋಡಿದರೆ ಬೆಂಕಿ ಹಾಕಿ ಶೂಟಿಂಗ್‌ ನಡೆಸಲಾಗಿದೆ. ಇದೇ ರೀತಿಯಾದರೆ ದೇಶ, ವಿದೇಶಿ ಪ್ರವಾಸಿಗರು ನದಿಪಾತ್ರದಲ್ಲಿ ಬೆಂಕಿ ಹಾಕುವ ಮೂಲಕ ಫೈರ್‌ ಕ್ಯಾಂಪ್‌ ಹಾಕುವ ಅಪಾಯವೂ ಇದೆ ಎಂದು ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹಂಪಿಯ ನದಿಪಾತ್ರದಲ್ಲಿ ಬೆಂಕಿ ಹಾಕಿ ಕಲ್ಟ್‌ ಚಿತ್ರ ತಂಡ ಶೂಟಿಂಗ್‌ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಗಾ ವಹಿಸಬೇಕು. ಅಪರೂಪದ ಜೀವಿಗಳು ಇರುವ ಪ್ರದೇಶದಲ್ಲಿ ಈ ರೀತಿ ನಡೆಯಬಾರದು ಎಂದು ವನ್ಯಜೀವಿ ಪ್ರೇಮಿ ಸಮದ್‌ ಕೊಟ್ಟೂರು ಕನ್ನಡಪ್ರಭ ಬಳಿ ಅಳಲು ವ್ಯಕ್ತಪಡಿಸಿದರು.