ಸಾರಾಂಶ
ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸುವುದು ಕಡ್ಡಾಯವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನನಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ನ ಯಾವ ನಾಯಕರೂ ಸೂಚಿಸಿಲ್ಲ. ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸುವುದು ಕಡ್ಡಾಯವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ಸ್ಪರ್ಧೆಗೆ ಹೈಕಮಾಂಡ್‌ನಿಂದ ಒತ್ತಡ ಬರುತ್ತಿರುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನನಗೇನೂ ಸೂಚನೆ ನೀಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 18 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ. ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ವೀಕ್ ಇದೆ. 28ರ ಪೈಕಿ 20 ಕ್ಷೇತ್ರಗಳಲ್ಲಿ ನಾವು ಪ್ರಬಲರಾಗಿದ್ದೇವೆ.
8 ಕ್ಷೇತ್ರಗಳಲ್ಲಿ ವೀಕ್ ಇದ್ದೇವೆ. ತಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಸಚಿವರೂ ಪ್ರಯತ್ನ ಮಾಡುತ್ತಾರೆ. ನಮ್ಮ ಸಚಿವರ ಪ್ರಯತ್ನದ ನಂತರವೂ ಕೆಲವೊಮ್ಮೆ ಫಲ ಸಿಗುವುದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆದಂಡವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ರೀತಿ ಹೈಕಮಾಂಡ್ ಯಾರಿಗೂ ಸೂಚಿಸಿಲ್ಲ, ಇದು ಕೇವಲ ಊಹಾಪೋಹವಷ್ಟೇ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡಬೇಕು. ಲೋಕಸಭೆ ಚುನಾವಣೆ ಸಂಬಂಧ ಈಗಾಗಲೇ ದೆಹಲಿ ಹಾಗೂ ಬೆಂಗಳೂರಲ್ಲಿ ಸಭೆ ಆಗಿದೆ ಎಂದ ಅವರು, ಬೆಳಗಾವಿ ಕ್ಷೇತ್ರದಿಂದ 10 ಹಾಗೂ ಚಿಕ್ಕೋಡಿ ಕ್ಷೇತ್ರದಿಂದ 6 ಜನ ಆಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳಕರ ಹಾಗೂ ಚಿಕ್ಕೋಡಿಯಿಂದ ತಾವು ಸ್ಪರ್ಧಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಚಿಕ್ಕೋಡಿ ದೂರವಾಗುತ್ತದೆ ಎಂದಷ್ಟೇ ಪ್ರತಿಕ್ರಿಯಿಸಿದರು. ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಎಐಸಿಸಿ, ಕೆಪಿಸಿಸಿ ಮತ್ತು ಮುಖ್ಯಮಂತ್ರಿ ಕಚೇರಿಯಿಂದ ಸರ್ವೆ ನಡೆಯುತ್ತಿದೆ ಎಂದರು.
ನಿಗಮ ಮಂಡಳಿ ಆಯ್ಕೆ ಸಂಬಂಧ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಯಾವಾಗ ಬೇಕಾದರೂ ಈ ಪಟ್ಟಿ ಬಿಡುಗಡೆಯಾಗಬಹುದು. ಜನವರಿ 14ರವರೆಗೆ ಗ್ರಹಣ ಹಿಡಿದಿತ್ತು. ಈಗ ಗ್ರಹಣ ಬಿಟ್ಟಿದೆ. ಹಾಗಾಗಿ, ಪಟ್ಟಿ ಆದಷ್ಟು ಬೇಗನೆ ಬಿಡುಗಡೆಯಾಗುತ್ತದೆ ಎಂದು ಹೇಳಿದರು.
ರಾಮಮಂದಿರ ಬಿಜೆಪಿ ಚುನಾವಣಾ ಅಸ್ತ್ರ
ಅಯೋಧ್ಯೆಯ ರಾಮಮಂದಿರದ ವಿಚಾರವನ್ನು ಬಿಜೆಪಿ ಮೊದಲಿನಿಂದಲೂ ಚುನಾವಣಾ ಅಸ್ತ್ರ ಮಾಡಿಕೊಳ್ಳುತ್ತಿದೆ. ರಾಮಮಂದಿರದ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ವಿಚಾರ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು. ಇದು ಬಿಜೆಪಿಯವರಿಗೆ ಅದ್ಹೇಗೆ ಲಾಭವಾಗುತ್ತದೆ ಎಂದು ಪ್ರಶ್ನಿಸಿದರು.
ರಾಮಮಂದಿರ ಉದ್ಘಾಟನೆ ದಿನ ರಜೆ ಘೋಷಣೆ ಕೊಡುವ ಸಂಬಂಧ ಸರ್ಕಾರ ತೀರ್ಮಾನ ಮಾಡಬೇಕು. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬರಬೇಡಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮನವಿ ಮಾಡಿದ್ದಾರೆ ಎಂದರು.