ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪತ್ನಿ ಹೆಸರಿನಲ್ಲಿ ಮಹಿಳೆಯೊಬ್ಬರು ಮತ ಹಾಕಿ ಅಕ್ರಮ ಎಸಗಲಾಗಿದೆ. ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೊತ್ತಿದ್ದೇ ಈ ಅಕ್ರಮ ನಡೆದಿದೆ.

ಹಾವೇರಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪತ್ನಿ ಹೆಸರಿನಲ್ಲಿ ಮಹಿಳೆಯೊಬ್ಬರು ಮತ ಹಾಕಿ ಅಕ್ರಮ ಎಸಗಲಾಗಿದೆ. ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೊತ್ತಿದ್ದೇ ಈ ಅಕ್ರಮ ನಡೆದಿದೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅ. 26ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಎದುರು ಪಕ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಮತದಾನಕ್ಕೆ ಚುನಾವಣಾ ಅಧಿಕಾರಿಗಳ ಸಹಕಾರ ಕೂಡ ಇದೆ. ಹಾವೇರಿ ತಹಸೀಲ್ದಾರ್‌ ಕಚೇರಿಯ 85ನೇ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿ ಆಶಾ ಪಾಟೀಲ ಅವರ ಹೆಸರಿನಲ್ಲಿ ಶಿಲ್ಪಾ ಬಡಮ್ಮನವರ ಎಂಬ ಮಹಿಳೆ ಮೂಲಕ ಮತದಾನ ಮಾಡಿಸಲಾಗಿದೆ. ಮತದಾನ ಮಾಡಿದ ಬಳಿಕ ಹೊರಬಂದು ಮತದಾನ ಮಾಡಿರುವುದನ್ನು ತೋರಿಸಲಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಸಚಿವರು ಸೇರಿ ಮತಚೋರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ದೂರಿದರು.

ಅಕ್ರಮ ನಡೆದಿರುವುದು ತಮಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅವರಿಗೆ ಗೊತ್ತಿಲ್ಲದೇ ಅವರ ಪತ್ನಿ ಹೆಸರಿನಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಇತಿಹಾಸವನ್ನು ಇದು ತೋರಿಸುತ್ತದೆ. ಎಷ್ಟು ನಕಲಿ ಮತದಾನ ನಡೆದಿದೆ ಎಂಬುದರ ಕುರಿತು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದಲ್ಲಿ ವೋಟ್ ಚೋರಿ ಮೂಲಕ ಬಿಜೆಪಿ ಅಧಿಕಾರ ನಡೆಸುತ್ತದೆ ಎಂದು ಆರೋಪಿಸುವ ಕಾಂಗ್ರೆಸ್ ಮುಖಂಡರು ಈಗ ತಾವೇ ವೋಟ್ ಚೋರಿ ನಡೆಸಿರುವುದು ಕಂಡುಬಂದಿದೆ. ಇದು ಕಾಂಗ್ರೆಸ್ ನಡೆದು ಬಂದ ಸಂಸ್ಕೃತಿಯನ್ನು ತೋರಿಸುತ್ತಿದ್ದು, ತಮ್ಮ ಪಕ್ಷದ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ ಎಂದು ಟೀಕಿಸಿದರು.

ಮತದಾನ ಅಕ್ರಮದಲ್ಲಿ ಚುನಾವಣಾ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯಿದ್ದು, ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಹಾಗೂ ಅಕ್ರಮವಾಗಿ ಮತದಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಮತದಾನ ಮಾಡಿಸುವ ಮೂಲಕ ಪರಿಶಿಷ್ಟ ಪಂಗಡದ ಮಹಿಳೆಯನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ಕಿರಣ ಕೊಳ್ಳಿ, ನಿರಂಜನ ಹೇರೂರ, ಸಿದ್ದಣ್ಣ ಚಿಕ್ಕಬಿದರಿ, ವಿಜಯಕುಮಾರ ಚಿನ್ನಿಕಟ್ಟಿ, ನೀಲಪ್ಪ ಚಾವಡಿ ಇದ್ದರು.

ವೋಟ್ ಚೋರಿ ಖಂಡಿಸಿ ಪ್ರತಿಭಟನೆ ಇಂದು..

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಡೆದಿರುವ ಮತದಾನ ಅಕ್ರಮವನ್ನು ಖಂಡಿಸಿ ಅ. 26ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಜೆ.ಎಚ್. ಪಟೇಲ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ, ಡಿ.ಸಿ. ಕಚೇರಿ ರಸ್ತೆ ಮೂಲಕ ಸಚಿವರ ನಿವಾಸಕ್ಕೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.