ಸಾರಾಂಶ
ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದಲ್ಲಿ ಈಚೆಗೆ ಕೊಲೆಯಾಗಿರುವ ಮರಿಯಮ್ಮಳ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಘಟನೆಯ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಗಂಗಾವತಿ
ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದಲ್ಲಿ ಈಚೆಗೆ ಕೊಲೆಯಾಗಿರುವ ಮರಿಯಮ್ಮಳ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಸಾಂತ್ವನ ಹೇಳಿದರು.ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರೊಂದಿಗೆ ಗ್ರಾಮದ ಮರಿಯಮ್ಮಳ ತವರುಮನೆಗೆ ಭೇಟಿ ನೀಡಿದ ಸಚಿವರು ಯುವತಿಯ ತಂದೆ ಗಾಳೆಪ್ಪ ಮತ್ತು ತಾಯಿ ಗಾಳೆಮ್ಮ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ಮೃತಳ ತಂದೆ ಗಾಳೆಪ್ಪ ಸಚಿವರಿಗೆ ಮಾಹಿತಿ ನೀಡಿ 2023ರಲ್ಲಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, ಗಂಡನ ಮನೆಯಲ್ಲಿನ ಹಿಂಸೆಯಿಂದಾಗಿ ಸಾವಿಗೀಡಾಗಿದ್ದಾಳೆ. ನಮ್ಮ ಮಗಳ ಮೇಲೆ ಹಲ್ಲೆಯಾಗಿದೆ. ಮಗಳ ಸಾವಿನಿಂದಾಗಿ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಇದಕ್ಕೆ ನ್ಯಾಯ ಒದಗಿಸಿಕೊಡಬೇಕು. ನಾವು ಕೂಲಿ ಮಾಡಿ ಬದುಕುವ ಜನ. ಉತ್ತಮ ಸಂಸಾರ ಕಟ್ಟಿಕೊಂಡು ಬಾಳು ಸಾಗಿಸಬೇಕಾದ ಮಗಳು ಸಾವಿಗೀಡಾಗಿದ್ದರಿಂದ ನಾವು ಕಂಗಾಲಾಗಿದ್ದೇವೆ. ಮುಂದೇನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ನಮಗೆ ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಘಟನೆಯ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಬೇಕೆಂದು ದಲಿತ ಮುಖಂಡರು ಸಚಿವರಲ್ಲಿ ಮನವಿ ಮಾಡಿಕೊಂಡರು.ಈ ಸಂದರ್ಭ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಪೊಲೀಸ್ ಅಧಿಕಾರಿಗಳಾದ ಸಿದ್ಧಲಿಂಗಗೌಡ ಪಾಟೀಲ, ಎಂ.ಡಿ. ಫೈಜುಲ್ಲಾ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಜು ಸೇರಿದಂತೆ ಇತರರು ಇದ್ದರು.