ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾಲಿ ಸಚಿವ ಯು.ಟಿ.ಖಾದರ್‌ ಹೊರತುಪಡಿಸಿ ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಿಗೆ ಬೇರೆ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಹೀಗಾಗಿ ಕರಾವಳಿಗೆ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಲಭಿಸಿದಂತಾಗಿದೆ. ಇದಲ್ಲದೆ ಸಚಿವ ಯು.ಟಿ.ಖಾದರ್‌ ಅವರಿಗೆ ದ.ಕ. ಮಾತ್ರವಲ್ಲ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನೂ ನೀಡಲಾಗಿದೆ. ಉತ್ತರ ಕನ್ನಡಕ್ಕೆ ಹೊರ ಜಿಲ್ಲೆಯ ಸಚಿವ ಲಕ್ಷ್ಮಣ ಸವದಿಗೆ ಉಸ್ತುವಾರಿ ಸ್ಥಾನ ವಹಿಸಲಾಗಿದೆ.

ಕಳೆದ ಬಾರಿ ಕೂಡ ಕರಾವಳಿ ಜಿಲ್ಲೆಗೆ ಒಂದೇ ಸಚಿವ ಸ್ಥಾನ ನೀಡಲಾಗಿತ್ತು. ಉತ್ತರ ಕನ್ನಡದ ಮಾಂಕಾಳ ವೈದ್ಯ ಸಚಿವರಾಗಿದ್ದರು. ಆಗ ದ.ಕ.ದಲ್ಲಿ ಯು.ಟಿ.ಖಾದರ್‌ ಸ್ಪೀಕರ್‌ ಆಗಿದ್ದರು. ಹಾಗಾಗಿ ಸಚಿವ ದಿನೇಶ್‌ ಗುಂಡೂರಾವ್‌ಗೆ ದ.ಕ. ಹಾಗೂ ಉಡುಪಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ನ್ನು ಉಸ್ತುವಾರಿ ಮಾಡಲಾಗಿತ್ತು. ಕಳೆದ ಬಾರಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಉತ್ತರ ಕನ್ನಡದ ಸಚಿವ ಮಾಂಕಾಳ ವೈದ್ಯಗೆ ಈ ಬಾರಿ ಸಚಿವ ಸಚಿವ ಸ್ಥಾನ ಸಿಕ್ಕಿಲ್ಲ.

ಈ ಬಾರಿ ಸಂಪುಟ ವಿಸ್ತರಣೆ ವೇಳೆ ಭಟ್ಕಳ ಶಾಸಕ ಮಾಂಕಾಳ ವೈದ್ಯ ಹೆಸರು ಅಂತಿಮಗೊಂಡವರ ಪಟ್ಟಿಯಲ್ಲಿತ್ತು. ಆದರೆ ಕೊನೆಕ್ಷಣದಲ್ಲಿ ಈ ಅವಕಾಶ ದಾವಣಗೆರೆಯ ಎಸ್‌.ಎಸ್‌.ಮಲ್ಲಿಕಾರ್ಜನ್‌ ಪಾಲಾಯಿತು ಎಂದು ನಂಬಲಾಗಿದೆ. ವಿಧಾನ ಪರಿಷತ್‌ ಸದಸ್ಯರಾದ ಹಿರಿಯ ಕಾಂಗ್ರೆಸಿಗ ಆರ್‌.ವಿ.ದೇಶಪಾಂಡೆ, ಮಂಜುನಾಥ ಭಂಡಾರಿ ಹಾಗೂ ಐವನ್‌ ಡಿಸೋಜಾ ಮತ್ತು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಇವರಿಗೂ ಸಚಿವ ಸ್ಥಾನ ಪ್ರಾಪ್ತಿಯಾಗಿಲ್ಲ. ಅದರಲ್ಲೂ ದೇಶಪಾಂಡೆ ಮತ್ತು ಮಂಜುನಾಥ ಭಂಡಾರಿಗೆ ಕಾಂಗ್ರೆಸ್‌ ಹೈಕಮಾಂಡ್‌ ವರೆಗಿನ ಪ್ರಭಾವ ಇದೆ. ಐವನ್‌ ಡಿಸೋಜಾ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿದ್ದವರು. ಅಶೋಕ್‌ ಕುಮಾರ್‌ ರೈ ಅವರು ಸಿಎಂ ಡಿಕೆಶಿ ಆಪ್ತರಲ್ಲಿ ಇರುವವರು. ಹೀಗಾಗಿ ಇವರೆಲ್ಲರೂ ಪ್ರಭಾವಿಗಳಾಗಿದ್ದರೂ ಸಚಿವ ಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.