ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ 17 ವರ್ಷದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ ನಿಲ್ದಾಣದಲ್ಲಿ ನಿಂತಿದ್ದಳು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಡ್ರಾಪ್ ನೀಡುವ ನೆಪದಲ್ಲಿ ಕಾಮುಕನೊಬ್ಬ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿರುವ ಆರೋಪ ತಾಲೂಕಿನ ಪೆರೇಸಂದ್ರದಲ್ಲಿ ಕೇಳಿ ಬಂದಿದೆ.

ಸೋಮವಾರ ರಾತ್ರಿ ಪೂರ್ತಿ ಕೂಂಬಿಂಗ್ ನಡೆಸಿ ಘಟನೆ ಸಂಬಂಧ ಆರೋಪಿ ಗಣೇಶ್​​ ಎಂಬಾತನನ್ನು ಬಂಧಿಸಿರುವ ಪೆರೇಸಂದ್ರ ಪೊಲೀಸರು, ಅಪ್ರಾಪ್ತ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.ಜಿಲ್ಲೆಯ ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ 17 ವರ್ಷದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಎಂಬಾತ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್​​ ಲೊಕೇಶನ್ ಪತ್ತೆ​​ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್​​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇನ್ನು ಚಿಕ್ಕಬಳ್ಳಾಪುರ ಮೂಲದ ಆರೋಪಿ ಗಣೇಶನಿಗೆ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವ ವಿಷಯ ತನಿಖೆ ವೇಳೆ ತಿಳಿದು ಬಂದಿದೆ. ಸಂತ್ರಸ್ತ ಬಾಲಕಿ ಮೊದಲೇ ತಂದೆ ಕಳೆದುಕೊಂಡಿದ್ದು, ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆಯಿಂದ ಆಕೆ ಮತ್ತಷ್ಟು ಅಘಾತಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದ್ದು, ಪೆರೇಸಂದ್ರ ಠಾಣೆಯ ಪೊಲೀಸರು ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಸಿಕೆಬಿ-1 ಅತ್ಯಾಚಾರ ಆರೋಪಿ ಗಣೇಶ್