ಸಮಸ್ಯೆಗಳ ಗೂಡಾದ ಅಲ್ಪಸಂಖ್ಯಾತರ ಹಾಸ್ಟೆಲ್‌

| Published : Aug 10 2025, 01:33 AM IST

ಸಮಸ್ಯೆಗಳ ಗೂಡಾದ ಅಲ್ಪಸಂಖ್ಯಾತರ ಹಾಸ್ಟೆಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಸಾಲು ಸಾಲು ಸಮಸ್ಯೆಗಳಿಂದ ತುಂಬಿಕೊಂಡಿದೆ.

ತುಂಬಿ ಹರಿಯುತ್ತಿರುವ ಶೌಚಾಲಯ ಗುಂಡಿಗಳುಹುಳು ತುಂಬಿದ ಗೋದಿ, ಮೂಲೆ ಸೇರಿದ ವಾಷಿಂಗ್‌ ಮಷಿನ್‌

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಸಾಲು ಸಾಲು ಸಮಸ್ಯೆಗಳಿಂದ ತುಂಬಿಕೊಂಡಿದೆ.

ಒಮ್ಮೆ ಈ ವಿದ್ಯಾರ್ಥಿ ನಿಲಯಕ್ಕೆ ಕಾಲಿಟ್ಟರೆ ಆವರಣ ದುರ್ನಾತ, ತುಂಬಿ ಹರಿಯುತ್ತಿರುವ ಶೌಚಾಲಯ ಗುಂಡಿಗಳು, ಹೂಳುತುಂಬಿದ ಒಳ ಚರಂಡಿ ಛೇಂಬರ್‌, ಕಳಪೆ ಸ್ನಾನಗೃಹಗಳು, ಹುಳು ತುಂಬಿದ ಗೋದಿ... ಹೀಗೆ ಸಾಲು ಸಾಲು ಸಮಸ್ಯೆಗಳ ಅನಾವರಣವಾಗುತ್ತದೆ.

ಈ ಹಾಸ್ಟೆಲ್‌ನಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 28 ವಿದ್ಯಾರ್ಥಿಗಳು ಅಭ್ಯಾಸ ಮುಗಿಸಿ ಹೊರಗೆ ಹೋಗಿದ್ದಾರೆ. ಮಕ್ಕಳಿಗೆ ಸ್ನಾನಗೃಹಗಳ ಕೊರತೆ ಇದ್ದ ಕಾರಣ ಕಟ್ಟಡದ ಮೇಲ್ಭಾಗದಲ್ಲಿ 3 ಸ್ನಾನಗೃಹಗಳನ್ನು ಕೆಆರ್‌ಐಡಿಎಲ್ ನಿರ್ಮಾಣ ಮಾಡಿದೆ. ಆದರೆ ಬಳಕೆಗೂ ಮುನ್ನವೇ ಕಿತ್ತು ಹೋಗಿವೆ. ಈ ವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಕಳಪೆ ಕಾಮಗಾರಿಯಾದರೂ ಹಾಸ್ಟೆಲ್ ವಾರ್ಡನ್‌ ಪತ್ರ ಬರೆದು ಕೈ ತೊಳೆದುಕೊಂಡಿದ್ದಾರೆ.

ನಿಲಯದಲ್ಲಿರುವ ವಾಷಿಂಗ್ ಮಷಿನ್ ಕೆಟ್ಟು 2 ವರ್ಷ ಕಳೆದರೂ ಈ ವರೆಗೂ ಬದಲಾಯಿಸಿಲ್ಲ. ತಟ್ಟೆಗಳನ್ನು ಇಡುವ ಸ್ಟ್ಯಾಂಡ್‌, ವಾಟರ್ ಫಿಲ್ಟರ್ ಬಳಕೆ ಮಾಡದೇ ನಿರುಪಯುಕ್ತವಾಗಿದೆ. ಗ್ರಂಥಾಲಯ ಕೊಠಡಿ ತುಂಬಾ ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿ ಬೀಗ ಹಾಕಲಾಗಿದೆ. ಮಕ್ಕಳಿಗೆ ಪುಸ್ತಕಗಳು ಸಿಗುತ್ತಿಲ್ಲ. ನಿರುಪಯುಕ್ತ ವಸ್ತುಗಳಿರುವ ಕೋಣೆಯಲ್ಲಿ ಗೋದಿ ಚೀಲ ಇಟ್ಟಿದ್ದಾರೆ. ಗೋದಿ ತುಂಬೆಲ್ಲ ನುಸಿಗಳಿವೆ. ಇದನ್ನೇ ಮಕ್ಕಳಿಗೆ ಆಹಾರವಾಗಿ ಬಳಕೆ ಮಾಡುತ್ತಿದ್ದಾರೆ. ಹಾಸ್ಟೆಲ್ ಆವರಣ ಕಸದಿಂದಲೇ ತುಂಬಿ ಹೋಗಿದೆ.

ಶೌಚಾಲಯ ಗುಂಡಿಗಳಲ್ಲಿ ತ್ಯಾಜ್ಯ,. ಅದರ ಪಕ್ಕದಲ್ಲೇ ಇರುವ ಒಳಚರಂಡಿಗಳ ಛೇಂಬರ್ ತುಂಬಾ ಹೂಳು ತುಂಬಿದೆ. ಇದರಿಂದ ದುರ್ನಾತ ಬೀರುತ್ತಿದೆ. ಆವರಣದಲ್ಲೇ ನೀರು ಹರಿಯುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ.

ಪತ್ರ ಬರೆದಿದ್ದೇವೆ:

ಶೌಚಾಲಯ ಗುಂಡಿಗಳ ಸ್ವಚ್ಛತೆಗೆ ಪುರಸಭೆಗೆ ಪತ್ರ ಬರೆಯಲಾಗಿದೆ. ಹಾಸ್ಟೆಲ್‌ಗೆ ಕೆಎಸ್ಎಫ್‌ಸಿಯಿಂದ ಹುಳು ತುಂಬಿದ ಗೋದಿ ಸರಬಜಾರು ಮಾಡಲಾಗಿದೆ. ನಮ್ಮ ನಿಲಯದಲ್ಲಿ ಅವುಗಳನ್ನು ಸ್ವಚ್ಛತೆ ಮಾಡಿ ಬಳಕೆ ಮಾಡುತ್ತಿದ್ದೇವೆ. ವಾಷಿಂಗ್ ಮಷಿನ್ ಅವಧಿ ಮುಗಿದಿದೆ, ಇದರಿಂದ ಕೆಟ್ಟು ಹೋಗಿದ್ದು, ಹೊಸದಾಗಿ ಇಲಾಖೆಯಿಂದ ಪೂರೈಕೆ ಮಾಡುತ್ತಾರೆ. ಕಟ್ಟಡ ಮೇಲ್ಭಾಗದಲ್ಲಿ ನಿರ್ಮಿಸಿದ ಸ್ನಾನಗೃಹಗಳ ಕಾಮಗಾರಿ ಕಳಪೆಯಾಗಿರುವ ಕುರಿತು ಕೆಆರ್‌ಐಡಿಎಲ್ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ಮಂಜುಳಾ ಹೇಳುತ್ತಾರೆ.

ಜುಲೈ ತಿಂಗಳ ಒಂದನೇ ವಾರದಲ್ಲೇ ಅಲ್ಪಸಂಖ್ಯಾತರ ಹಾಸ್ಟೆಲ್‌ಗೆ ಗುಣಮಟ್ಟದ ಗೋದಿ ಪೂರೈಕೆ ಮಾಡಿದ್ದೇವೆ. ನಮ್ಮಲ್ಲಿ ಗೋದಿಗೆ ಹುಳು, ನುಸಿ ಹತ್ತಿಲ್ಲ. ಅವರು ಅವುಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಿದೆ ಎಂದು ಕೆಎಸ್ಎಫ್‌ಸಿ ವ್ಯವಸ್ಥಾಪಕ ಬುದ್ಧ ಮಾಹಿತಿ ನೀಡಿದರು.