ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಆರೋಗ್ಯ ಪಂಢರಿಯೆಂದೇ ಪ್ರಸಿದ್ಧಿ ಹೊಂದಿರುವ ಮಿರಜ್ ಪಟ್ಟಣ ಸ್ವಾತಂತ್ರ್ಯ ಪೂರ್ವದಿಂದಲೂ ಈ ಭಾಗದ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುತ್ತಿದ್ದು, ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಪ್ರಕಾಶ ಅಬಿಟಕರ ಹೇಳಿದರು.ನೆರೆಯ ಮಹಾರಾಷ್ಟ್ರದ ಮಿರಜ್ ಪಟ್ಟಣದಲ್ಲಿ ನೂತನ ಯುನಿಕ್ ಇನ್ಟಿಟ್ಯೂಟ್ ಆಫ್ ಕ್ರಿಟಿಕಲ್ ಕೆರ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಿರಜ್ ಪಟ್ಟಣದ ಹೆಸರಾಂತ ಸುಮಾರು 25 ವೈದ್ಯರು ಸೇರಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, ಇದು ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಲಿ. ಜೊತೆಗೆ ಮಹಾರಾಷ್ಟ್ರದ ಸರ್ಕಾರದ ಆರೋಗ್ಯ ಯೋಜನೆಗಳನ್ನು ಈ ಆಸ್ಪತ್ರೆಯಲ್ಲಿ ನೀಡಲು ಎಲ್ಲ ರೀತಿಯ ಸಹಕಾರ ಮಾಡುವುದಾಗಿ ತಿಳಿಸಿದರು.ಆಯುಷಮಾನ ಭಾರತ ಮಿಷನ್‌ನ ಮಹಾರಾಷ್ಟ್ರ ಕಮೀಟಿಯ ಅಧ್ಯಕ್ಷ ಡಾ.ಓಂಪ್ರಕಾಶ ಸೇಠ ಮಾತನಾಡಿ, ವೈದ್ಯರು ವೈದ್ಯಕೀಯ ಸೇವೆ ನೀಡಬೇಕೇ ವಿನಃ ವೈದ್ಯಕೀಯವನ್ನು ವ್ಯವಹಾರ ಮಾಡಿಕೊಳ್ಳಬಾರದು. ಆಯುಷಮಾನ ಯೋಜನೆಯ ಮೂಲಕ ನಿಮ್ಮ ಆಸ್ಪತ್ರೆ ಈ ಭಾಗದ ರೋಗಿಗಳಿಗೆ ವರದಾನವಾಗಲಿ ಎಂದರು.ಶಾಸಕ ಸುರೇಶಭಾವು ಖಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಸಾಂಗಲಿ ಸಂಸದ ವಿಶಾಲ ಪಾಟೀಲ, ವಿಧಾನ ಪರಿಷತ್ ಸದಸ್ಯ ಈದ್ರಸ್ ನಾಯಿಕವಾಡಿ, ಕಾಗವಾಡ ಶಾಸಕ ರಾಜು ಕಾಗೆ, ವಿಶ್ವಜೀತ ಕದಂ, ಸಮೀತ ಕದಂ, ಅಜೀತರಾವ ಘೋರಪಡೆ, ಸಂಜಯ ಭೋಕರೆ, ಡಾ.ಸೋಮಶೇಖರ ಪಾಟೀಲ, ಡಾ.ಶಿರಿಷ ಚವ್ಹಾಣ, ಡಾ.ದೀಲಿಪ ಟಕಲೆ, ಡಾ.ಶಿಷಿರ ಗೋಸಾವಿ, ಡಾ.ಸಾನಿಕಾ ಪ್ರಾಣಿ, ಡಾ.ಶಬಾನ ಮುಜಾವರ, ಡಾ. ರಿಯಾಜ ಮುಜಾವರ ಸೇರಿದಂತೆ ಪಟ್ಟಣದ ಹೆಸರಾಂತ ವೈದ್ಯರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.