ಸಾರಾಂಶ
ವಸಂತಕುಮಾರ ಕತಗಾಲ
ಕಾರವಾರ: ಇಸ್ರೇಲ್ ವಿರುದ್ಧ ಇರಾನ್ ದಾಳಿ ಆರಂಭಿಸಿದೆ. ಹಮಾಸ್, ಹಿಜ್ಬುಲ್ಲಾ, ಹೌತಿಗಳೂ ಇಸ್ರೇಲ್ ವಿರುದ್ಧ ಮುಗಿಬಿದ್ದಿವೆ. ಹೀಗಿದ್ದರೂ ಇಸ್ರೇಲ್‌ನಲ್ಲಿರುವ ಕನ್ನಡಿಗರು, ಭಾರತೀಯರು ಭಯಭೀತರೇನೂ ಆಗಿಲ್ಲ. ನಮ್ಮವರ ಧೈರ್ಯಕ್ಕೆ ಅಲ್ಲಿನ ಐರನ್ ಡೋಮ್ ಹಾಗೂ ಪ್ರತಿಯೊಬ್ಬ ಇಸ್ರೇಲಿಗರ ಕೈಯಲ್ಲೂ ಕಾಣಿಸುವ ಎಕೆ 47 ಗನ್ ಕಾರಣ.
ಇಸ್ರೇಲಿನಲ್ಲಿರುವ ಕನ್ನಡಿಗರಿಗೆ ಅಲ್ಲಿನ ಯುದ್ಧ ಈಗ ಹೊಸದೇನೂ ಅಲ್ಲ ಎನ್ನುವಂತಾಗಿದೆ. ಸೈರನ್ ಮೊಳಗುತ್ತಿದ್ದಂತೆ ಸ್ವಲ್ಪ ಮಟ್ಟಿಗೆ ಆತಂಕ ಕಾಡುತ್ತದೆ. ತಕ್ಷಣ ಬಂಕರ್‌ಗಳಲ್ಲಿ ಆಶ್ರಯ ಪಡೆಯುತ್ತಾರೆ. ನಂತರ ಪೇಟೆ, ಪಟ್ಟಣ, ಜನಸಂಚಾರ ಎಲ್ಲವೂ ಮಾಮೂಲಿಯಂತಾಗುತ್ತದೆ. ಇದೇ ಕಾರಣಕ್ಕೆ ಇಸ್ರೇಲಿನಲ್ಲಿ ನೆಲೆಸಿರುವ ಕನ್ನಡಿಗರು ಈಗ ತವರಿಗೆ ಮರಳುತ್ತೇನೆ ಎಂದು ಗೋಗರೆಯುತ್ತಿಲ್ಲ. ನಮ್ಮನ್ನು ರಕ್ಷಿಸಿ ಎಂದು ಅಂಗಲಾಚುತ್ತಿಲ್ಲ. ವರ್ಷದಿಂದ ಹಮಾಸ್ ನಡುವೆ ಕಾದಾಟ ನಡೆಯುತ್ತಿದೆ. ಲೆಬನಾನ್ ನ ಹಿಜ್ಬುಲ್ಲಾ, ಓಮನ್‌ನ ಹೌತಿಗಳ ವಿರುದ್ಧವೂ ಇಸ್ರೇಲ್ ಮುಗಿಬಿದ್ದಿದೆ.
ಇರಾನ್ ಈಚೆಗೆ ಮಿಸೈಲ್‌ಗಳ ಮಳೆಗರೆದಿದೆ. ಸಾಲದೆಂಬಂತೆ ಹಮಾಸ್ ಹಾಗೂ ಹಿಜ್ಬುಲ್ಲಾ ಉಗ್ರರು ಇಸ್ರೇಲಿನ ಒಳಗಡೆ ನುಗ್ಗಿ ಬಂದೂಕಿನ ದಾಳಿ ನಡೆಸುವ ಯೋಜನೆ ರೂಪಿಸಿದ್ದಾರೆ. ಈಗಾಗಲೆ ಎರಡು ಕಡೆ ಬಂದೂಕಿನ ದಾಳಿ ಆಗಿದೆ. ಇಸ್ರೇಲಿನ 5- 6 ಜನರು ಮೃತಪಟ್ಟಿದ್ದಾರೆ. ಆ ಬಂದೂಕುಧಾರಿಗಳನ್ನು ಇಸ್ರೇಲ್ ನಾಗರಿಕರೇ ಹೊಡೆದುರುಳಿಸಿದ್ದಾರೆ.
ಮೊನ್ನೆ ಟ್ರಕ್ ಚಾಲಕನೊಬ್ಬ ಇಸ್ರೇಲಿಗರ ಮೇಲೆ ಟ್ರಕ್ ಹಾಯಿಸಿದ್ದಾನೆ. ತಕ್ಷಣ ಬೈಕಿನಲ್ಲಿ ಹೋಗುತ್ತಿದ್ದ ಇಸ್ರೇಲ್ ನಾಗರಿಕನೊಬ್ಬ ಲಾರಿ ಚಾಲಕನನ್ನು ಹತ್ಯೆ ಮಾಡಿ, ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ.ಹೊರಗಿನಿಂದ ಹೋರಾಟದ ಜತೆ ಇಸ್ರೇಲಿನ ಒಳಗಡೆ ಭಯೋತ್ಪಾದಕ ಚಟುವಟಿಕೆ ನಡೆಸಿ ಇಸ್ರೇಲನ್ನು ಬಗ್ಗುಬಡಿಯುವ ಪ್ಲ್ಯಾನ್ ರೂಪಿಸಿ ಉಗ್ರರು ಕಾರ್ಯಾಚರಣೆಗಿಳಿದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸರ್ಕಾರ ಜನರ ಕೈಗೆ ಬಂದೂಕು ನೀಡಿದೆ. ಉಗ್ರರು ಬಂದೂಕು ದಾಳಿ ನಡಿಸಿದರೆ ಭದ್ರತಾ ಪಡೆಗಳಿಗಾಗಿ ಕಾಯಬೇಕಾಗಿಲ್ಲ.
ಇಸ್ರೇಲಿ ನಾಗರಿಕರೇ ಭಯೋತ್ಪಾದಕರನ್ನು ಹೊಡೆದುರುಳಿಸುತ್ತಿದ್ದಾರೆ. ಈಗ ಬಹುತೇಕ ಎಲ್ಲ ಇಸ್ರೇಲಿ ನಾಗರಿಕರ ಕೈಯಲ್ಲೂ ಅತ್ಯಾಧುನಿಕ ಬಂದೂಕುಗಳಿವೆ. ಅಲ್ಲಿನ ಜನರು ಎಕೆ 47 ಹಿಡಿದೇ ಓಡಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬನೂ ಸೇನೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವುದರಿಂದ ಇಡಿ ಇಸ್ರೇಲ್ ಒಂದು ಬೃಹತ್ ಸೇನಾಪಡೆಯಂತೆ ಕಾಣಿಸುತ್ತಿದೆ.
ಮನೆಯಿಂದ ಹೊರಬರುವ ಪ್ರತಿ ಇಸ್ರೇಲಿಗನೂ ಒಬ್ಬ ನುರಿತ ಯೋಧನೇ ಆಗಿರುತ್ತಾನೆ. ಹೊರಗಿನಿಂದ ಬರುವ ಮಿಸೈಲ್‌ಗಳನ್ನು ಐರನ್ ಡೋಮ್ ಹೊಸಕಿ ಹಾಕುತ್ತಿದೆ. ಐರನ್ ಡೋಮ್‌ನಿಂದಾಗಿ ಜನತೆ ನಿಶ್ಚಿಂತೆಯಿಂದ ಇದ್ದಾರೆ. ಆಂತರಿಕವಾಗಿ ಇಸ್ರೇಲಿನ ಪ್ರತಿಯೊಬ್ಬರೂ ಭದ್ರತಾ ಪಡೆಯ ಸದಸ್ಯರಂತಾಗಿದ್ದಾರೆ. ಇದು ಜನತೆಯ ನೆಮ್ಮದಿಗೆ ಕಾರಣವಾಗಿದೆ. ಕನ್ನಡಿಗರು ಸೇರಿದಂತೆ ವ್ಯಾಪಕವಾಗಿ ಭಾರತೀಯರು ಧೈರ್ಯಗುಂದದೆ ಇರಲು ಈ ಎರಡು ವ್ಯವಸ್ಥೆ ಪ್ರಮುಖ ಕಾರಣವಾಗಿದೆ.
ಗುರುವಾರ ಇಸ್ರೇಲ್‌ನಲ್ಲಿ ಹೊಸ ವರ್ಷದ ಹಬ್ಬ ‘ಹ್ಯಾಪಿ ರೋಶ್ ಹಶಾನಾಹ್’ ಎಂದು ಪರಸ್ಪರ ಕೈಕುಲುಕುತ್ತಿದ್ದಾರೆ. ಜೆರುಸಲೆಂನ ವೆಸ್ಟರ್ನ ವಾಲ್ ಪ್ಲಾಜಾ(ಗೋಡೆ)ಎದುರು ನಿಂತು ಯಹೂದಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಮನೆ ಮನೆಗಳಲ್ಲೂ ಹಬ್ಬದ ಸಡಗರ ಉಂಟಾಗಿದೆ. ಕನ್ನಡಿಗರೂ ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇರಾನ್ ವಿರುದ್ಧ ಆಕ್ರೋಶ
ಬುಧವಾರ ಇರಾನ್ ಸಿಡಿಸಿದ ಕ್ಷಿಪಣಿಗಳನ್ನು ಐರನ್ ಡೋಮ್ ಹೊಡೆದುರುಳಿಸಿದಾಗ ಅದರ ಅವಶೇಷಗಳು ಟೆಲ್ ಅವೀವ್‌ನಲ್ಲಿ ಬಂದು ಬಿದ್ದಿವೆ. ಜನತೆ ಆ ಕ್ಷಿಪಣಿಯ ಅವಶೇಷ ಹಿಡಿದೆತ್ತಿ ಇರಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುರಕ್ಷಿತ: ನಾವು ಸುರಕ್ಷಿತವಾಗಿದ್ದೇವೆ. ಇಸ್ರೇಲಿನ ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಇಸ್ರೇಲಿ ನಾಗರಿಕರ ಸರ್ಪಗಾವಲು ನಮ್ಮಲ್ಲಿ ಭರವಸೆ ಮೂಡಿಸಿದೆ. ಅದರಲ್ಲೂ ಕನ್ನಡಿಗರು ಹಾಗೂ ಭಾರತೀಯರನ್ನು ಇಸ್ರೇಲ್‌ನಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಇಸ್ರೇಲ್ನಲ್ಲಿರುವ ದೀಪಕ್ ಎಚ್. ತಿಳಿಸಿದರು.