ಸಾರಾಂಶ
ರಾಮನಗರ: ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯಲ್ಲಿ ನಕಲಿ ಚಿನ್ನ ಅಡವಿಡಿಸಿ 9 ಕೋಟಿಗೂ ಹೆಚ್ಚಿನ ಹಣ ದುರುಪಯೋಗವಾಗಿದೆ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದೂರು ಶಾಖೆಯ ಕೋಟ್ಯಂತರ ರು. ಹಗರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಸಹಕಾರ ಸಚಿವ ರಾಜಣ್ಣ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ ಅವರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಹೋದರ ಆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ (ತಮ್ಮಾಜಿ) ಕೋಟ್ಯಂತರ ರು. ಹಗರಣದ ರುವಾರಿಯಾಗಿದ್ದಾರೆ. ನಕಲಿ ಚಿನ್ನ ಅಡವಿಡಿಸಿ ಅಶೋಕ್ ತಮ್ಮ ಬೆಂಬಲಿಗರಿಗೆ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಶಾಖೆ ಮ್ಯಾನೇಜರ್, ಅಪ್ರೈಸರ್ ಮಾತ್ರವಲ್ಲದೆ ಸಿಬ್ಬಂದಿಗಳೆಲ್ಲರು ಭಾಗಿಯಾಗಿದ್ದಾರೆ. ತಮ್ಮದೇ ಸರ್ಕಾರ ಆಡಳಿತದಲ್ಲಿದೆ ಎಂದು ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುದೂರು ಶಾಖೆಯಲ್ಲಿ ದುರುಪಯೋಗವಾಗಿರುವ 9 ಕೋಟಿ ರೈತರ ಬೆವರಿನ ಹಣ. ಕೃಷಿ ಚಟುವಟಿಕೆ ಮತ್ತು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ರೈತರು ಬ್ಯಾಂಕಿನಲ್ಲಿ ಸಾಲ ಪಡೆದು, ಅದಕ್ಕೆ ಬಡ್ಡಿ ಕಟ್ಟುತ್ತಾರೆ. ಈ ಮೂಲಕ ಸಹಕಾರ ಕ್ಷೇತ್ರ ಬೆಳೆಯಲಿ ಎಂಬುದು ರೈತರ ಉದ್ದೇಶ. ಅದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ದೂರಿದರು.ಶಾಖೆ ಮ್ಯಾನೇಜರ್ ವರ್ಗಾವಣೆ ವಿಚಾರದ ವೇಳೆ ಕೋಟ್ಯಂತರ ರುಪಾಯಿ ಹಣ ದುರುಪಯೋಗದ ವಿಚಾರ ಬಹಿರಂಗವಾಗಿದೆ. ಇದು ಎಷ್ಟು ವರ್ಷಗಳಿಂದ ನಡೆದು, ಎಷ್ಟು ಕೋಟಿ ರು.ದುರುಪಯೋಗವಾಗಿದೆ. ಇದರಲ್ಲಿ ಸ್ವಯಂ ಘೋಷಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಾಗಡಿ ಕ್ಷೇತ್ರದ ನಿರ್ದೇಶಕ ಅಶೋಕ್ ಪಾತ್ರ ಏನಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಿಲ್ಲ ಏಕೆ? ಶಾಖೆ ಮ್ಯಾನೇಜರ್ ಸೇರಿದಂತೆ ಸಿಬ್ಬಂದಿ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಲಿಲ್ಲ ಏಕೆಂದು ಪ್ರಶ್ನಿಸಿದರು.
ಬಿಡಿಸಿಸಿ ಬ್ಯಾಂಕ್ ಗೆ ಬಾಲಕೃಷ್ಣರ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶವೇ ನೀಡುತ್ತಿಲ್ಲ. ರೈತರ ಹಣ ದುರುಪಯೋಗ ಮಾಡಿಕೊಳ್ಳುವುದೇ ಅವರಿಗೆ ದಂಧೆಯಾಗಿದೆ. ಬ್ಯಾಂಕ್ ಗಳು ಸರಿಯಾಗಿ ಕೆಲಸ ಮಾಡದ ಕಾರಣದಿಂದಲೇ ನಬಾರ್ಡ್ ಸಾಲ ಕೊಡುತ್ತಿಲ್ಲ. ತುಮಕೂರು, ಕೋಲಾರ ಹಾಗೂ ಹಾಸನದಲ್ಲಿ ಸ್ವಸಹಾಯ ಗುಂಪಿಗೆ ಒಂದು ಕೋಟಿವರೆಗೆ ಸಾಲ ನೀಡಿದ್ದಾರೆ. ಬಿಡಿಸಿಸಿ ಬ್ಯಾಂಕ್‌ನಿಂದ ಸಾಧ್ಯವಾಗಿಲ್ಲ ಏಕೆಂದು ಪ್ರಶ್ನಿಸಿದರು.ಬ್ಯಾಂಕಿನಲ್ಲಿ ಕುರಿ ಕೋಳಿ ಸಾಕಾಣಿಕೆ ನೆಪದಲ್ಲಿಯೂ ಹಣ ದುರುಪಯೋಗ ಆಗುತ್ತಿದೆ. ಆ ಹಣ ಮನ್ನಾ ಆದರೆ ನಿರ್ದೇಶಕರ ಜೇಬು ಪಾಲಾಗುತ್ತದೆ. ಯಾವ ರೈತ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾನೊ ಆತನ ಷೇರು ಇಲ್ಲದಂತೆ ಮಾಡುತ್ತಾರೆ. ಬ್ಯಾಂಕುಗಳಲ್ಲಿ ಪ್ರತಿದಿನ ರೈತರ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಚಕ್ರಬಾವಿ ಸೊಸೈಟಿಯಲ್ಲಿಯೂ ರೈತರ ಹಣ ದುರುಪಯೋಗವಾಗಿದೆ. ನನಗೆ ಗೊತ್ತಾದಾಗ ಆ ಸೊಸೈಟಿ ಕಾರ್ಯದರ್ಶಿ ನನ್ನ ಬಳಿ ಬಂದು ಸರಿ ಪಡಿಸುವುದಾಗಿ ಕ್ಷಮೆಯಾಚಿಸಿ ಹೋಗಿದ್ದಾನೆ. ಈ ರೀತಿ ಪ್ರತಿ ಸೊಸೈಟಿಯಲ್ಲಿ ಕೋಟ್ಯಂತರ ರು. ಹಣ ದುರುಪಯೋಗ ಆಗುತ್ತಿದೆ ಎಂದು ಮಂಜುನಾಥ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್, ಮುಖಂಡರಾದ ಶೇಷಪ್ಪ, ನರಸಿಂಹಯ್ಯ, ಇಟ್ಟುಮಡು ಗೋಪಾಲ್, ಖಲೀಲ್ ಇದ್ದರು.ಬಾಕ್ಸ್ .................
ಕ್ಷೇತ್ರ ಪುನರ್ ವಿಂಗಡಣೆ ರಚನೆಯಾಗಿಲ್ಲ ಏಕೆ: ಮಂಜುನಾಥ್ ಪ್ರಶ್ನೆರಾಮನಗರ: ಬಿಡಿಸಿಸಿ ಬ್ಯಾಂಕ್ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಹಾರೋಹಳ್ಳಿ ತಾಲೂಕು ಹಾಗೂ ಸೋಲೂರು ಹೋಬಳಿಯನ್ನು ಒಂದೊಂದು ಕ್ಷೇತ್ರವನ್ನಾಗಿ ಏಕೆ ರಚನೆ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ 5 ಮತ್ತು 3 ಸೊಸೈಟಿಗಳಿಗೆ ಒಬ್ಬೊಬ್ಬ ನಿರ್ದೇಶಕರು ಆಯ್ಕೆಯಾಗುತ್ತಿದ್ದಾರೆ. ಕಮಿಷನ್ ಹಣ ಕಡಿಮೆ ಆಗುತ್ತದೆ ಎಂಬ ಕಾರಣದಿಂದಾಗಿ ಕ್ಷೇತ್ರ ಪುನರ್ ವಿಂಗಡಣೆಗೆ ಹಿರಿಯ ನಿರ್ದೇಶಕರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಸೊಸೈಟಿಗಳು ನಿರ್ದೇಶಕರ ಕೈಯಲ್ಲಿಯೇ ಇರಬೇಕು. ಸಾಲ ವಿತರಣೆ, ಮರುಪಾವತಿ ಎಲ್ಲವೂ ಬುಕ್ ಅಡ್ಜಸ್ಟ್ ಮೆಂಟ್ ನಲ್ಲಿ ನಡೆಯುತ್ತಿದೆ. ಕೆಸಿಸಿ ಲೋನ್ ನಲ್ಲಿ ಕಮಿಷನ್ ಸೇರಿದಂತೆ ಪ್ರತಿಯೊಬ್ಬ ನಿರ್ದೇಶಕ ವರ್ಷಕ್ಕೆ 5 ಕೋಟಿ ರುಪಾಯಿ ಕಮಿಷನ್ ಪಡೆಯುತ್ತಿದ್ದಾನೆ. ಹೀಗಾಗಿಯೇ ಒಂದೇ ಕುಟುಂಬದವರು ಸಹಕಾರ ಕ್ಷೇತ್ರಗಳಿಗೆ ಆಯ್ಕೆಯಾಗುತ್ತಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರದಲ್ಲಿ ಸಚಿವ ರೇವಣ್ಣ ರಾಮನಗರ ಜಿಲ್ಲೆಗೆ ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಆಗ ಡಿ.ಕೆ.ಶಿವಕುಮಾರ್ ಬೇಡವೆಂದು ವಿರೋಧಿಸಿದ್ದರು. ಆದರೀಗ ಬಿಡಿಸಿಸಿ ಬ್ಯಾಂಕ್ ಹಗರಣಗಳ ಕೂಪವಾಗಿದೆ. ಅದನ್ನು ಸರಿಪಡಿಸುವ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಾಡುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲಿದೆ ಎಂದು ಮಂಜುನಾಥ್ ಹೇಳಿದರು.6ಕೆಆರ್ ಎಂಎನ್ 1.ಜೆಪಿಜಿಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.