ಕಾರ್ಮಿಕರ ಕಲ್ಯಾಣ ಮಂಡಳಿ ಹಣ ದುರುಪಯೋಗ

| Published : Aug 04 2025, 11:45 PM IST

ಸಾರಾಂಶ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅಭದ್ರತೆಯಲ್ಲಿ ಅತ್ಯಂತ ಸಂಕಷ್ಠದಲ್ಲಿ ಜೀವನ ನಡೆಸುತ್ತಿದ್ದು, ಇವರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಕಲ್ಯಾಣ ಮಂಡಳಿಗಳನ್ನು ರಚಿಸಲಾಯಿತು. ರಾಜ್ಯದಲ್ಲಿ ಕಾರ್ಮಿಕರಿಗೆ ಕೆಲವು ಸೌಲಭ್ಯಗಳನ್ನು ನೀಡುತ್ತಿದ್ದರೂ, ಕಾರ್ಮಿಕರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಕಟ್ಟಡ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡದೇ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ದುರುಪಯೋಗ ಮಾಡುವ ಮೂಲಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ರಾಜ್ಯ ಖಜಾಂಚಿ ಎನ್.ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಕೋಲಾರ ಜಿಲ್ಲಾ ೫ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಜೀವನಕ್ಕೆ ಅಭದ್ರತೆ ಇಲ್ಲ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅಭದ್ರತೆಯಲ್ಲಿ ಅತ್ಯಂತ ಸಂಕಷ್ಠದಲ್ಲಿ ಜೀವನ ನಡೆಸುತ್ತಿದ್ದು, ಇವರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಕಲ್ಯಾಣ ಮಂಡಳಿಗಳನ್ನು ರಚಿಸಲಾಯಿತು. ರಾಜ್ಯದಲ್ಲಿ ಕಾರ್ಮಿಕರಿಗೆ ಕೆಲವು ಸೌಲಭ್ಯಗಳನ್ನು ನೀಡುತ್ತಿದ್ದರೂ, ಕಾರ್ಮಿಕರಿಗೆ ಯಾವುದೇ ಅನುಕೂಲವಾಗದ ವಿವಿಧ ಕಿಟ್‌ಗಳ ವಿತರಣೆ, ಆರೋಗ್ಯ ಶಿಬಿರಗಳು, ವಸತಿ ಶಾಲೆ, ಅಂಬ್ಯುಲೆನ್ಸ್ ಮತ್ತಿತರ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇವುಗಳು ಬಹುತೇಕ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾತೆಗೆ ಹಣ ಪಾವತಿಸಲಿ

ಕಾರ್ಮಿಕ ಕಲ್ಯಾಣ ಮಂಡಳಿಯ ಕಾಯ್ದೆಯಲ್ಲಿ ವಸ್ತು ರೂಪದಲ್ಲಿ ವಿತರಣೆ ಮಾಡದೇ ಫಲಾನುಭವಿಗಳ ಖಾತೆಗೆ ನೇರ ಪಾವತಿ ಮಾಡುವಂತೆ ಸ್ಪಷ್ಠವಾಗಿ ತಿಳಿಸಿದ್ದರೂ, ಈ ನಿಯಮಗಳಿಗೆ ಉಲ್ಲಂಘಟಿಸಿ ಸಾವಿರಾರು ಕೋಟಿ ರೂ. ಹಣವನ್ನ ವ್ಯರ್ಥವಾಗಿ ಖರ್ಚು ಮಾಡಲಾಗುತ್ತಿದೆ. ಈ ಕುರಿತು ಕಾರ್ಮಿಕರು ಸಂಘಟಿತರಾಗಿ ನಿರಂತರವಾದ ಹೋರಾಟಗಳನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಾತಕೋಟೆ ನವೀನ್‌ಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಕೆ.ಮಂಜುನಾಥ್, ಎಸ್.ಆಶಾ ಇದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್ ಸ್ವಾಗತಿಸಿದರು.ನೂತನ ಪದಾಧಿಕಾರಿಗಳು ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ಪಿ.ಶ್ರೀನಿವಾಸ್, ಕಾರ್ಯಾಧ್ಯಕ್ಷರಾಗಿ ಕೆ.ಮಂಜುನಾಥ್, ಕಾರ್ಯದರ್ಶಿ ಎಂ.ಭೀಮರಾಜ್, ಖಜಾಂಚಿ ಎಸ್.ಆಶಾ, ಉಪಾಧ್ಯಕ್ಷರಾಗಿ ಹೆಚ್ ರಮೇಶ್, ರಾಮಚಂದ್ರಪ್ಪ, ಪೆರುಮಾಳಪ್ಪ, ಸತೀಶ್ ಕುಮಾರ್ ಸಹ ಕಾರ್ಯದರ್ಶಿಯಾಗಿ ಎಂ ವಿಜಯಕೃಷ್ಣ, ಬಿ.ಹೆಚ್. ವಿಶ್ವನಾಥ್, ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.