ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ<bha>;</bha> ದಲಿತ ಮುಖಂಡರ ಆರೋಪ

| Published : Dec 28 2023, 01:46 AM IST

ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ<bha>;</bha> ದಲಿತ ಮುಖಂಡರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ವಿಶೇಷ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ವ್ಯಯಿಸಿ ಸಮುದಾಯದ ಜನರಿಗೆ ವಂಚಿಸಲಾಗುತ್ತಿದೆ ಎಂದು ದಲಿತ ಸಮುದಾಯ ಮುಖಂಡರು ಅರಕಲಗೂಡಿನಲ್ಲಿ ನಡೆದ ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆ । ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಅರಕಲಗೂಡು

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ವಿಶೇಷ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ವ್ಯಯಿಸಿ ಸಮುದಾಯದ ಜನರಿಗೆ ವಂಚಿಸಲಾಗುತ್ತಿದೆ ಎಂದು ದಲಿತ ಸಮುದಾಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಎಸ್ಸಿ, ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕ ಶೇಖರ್ ವರ್ಗ 1 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ದಲಿತರಿಗೆ ಮೀಸಲಾದ ಶೇ. 25 ಅನುದಾನದ ಖರ್ಚು ವೆಚ್ಚಗಳ ಮಾಹಿತಿ ನೀಡಲು ಮುಂದಾದಾಗ ಮುಖಂಡರಾದ ರಾಜೇಶ್, ಗಣೇಶ್ ವೇಲಾಪುರಿ, ಮರಿಲಕ್ಕಿ ರಮೇಶ್, ಜಯರಾಜ್, ಶಂಕರ್ ಮತ್ತಿತರರು ಮಾತನಾಡಿ, ಸಮುದಾಯದ ಕಲ್ಯಾಣಕ್ಕಾಗಿ ಮೀಸಲಾದ ಅನುದಾನ ದುರ್ಬಳಕೆಯಾಗುತ್ತಿದೆ. ಶುಚಿತ್ವ, ಬೀದಿ ದೀಪ, ಬೋರ್‌ವೆಲ್‌ಗಳ ದುರಸ್ತಿಗೆ ಬಳಸಲಾಗುತ್ತಿದೆ. ಈ ಕುರಿತು ಯಾವ ಕಾಮಗಾರಿಗಳಿಗೆ ಅನುದಾನ ಖುರ್ಚು ಮಾಡಲಾಗಿದೆ ಎನ್ನುವ ಕುರಿತು ಮಾಹಿತಿ ನೀಡಬೇಕು, ಸಮುದಾಯದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಒತ್ತಾಯಿಸಿದರು. ಈ ಕುರಿತು ದಾಖಲೆ ಸಮೇತ ಸಮಗ್ರ ಮಾಹಿತಿ ಒದಗಿಸುವಂತೆ ಶಾಸಕ ಎ. ಮಂಜು ಪಿಡಿಒಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ಗೋರಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳಿಗೆ ಶಿಕ್ಷೆಯಾಗಿಲ್ಲ. ಸಿಂಗನಕುಪ್ಪೆ ಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ಎಸಗಿದೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮುಖಂಡರು ಆಕ್ಷೇಪ ವ್ಯಪಡಿಸಿದರು. ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದರೂ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ಕೊಣನೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಪೊಲೀಸ್ ಠಾಣೆಗೆ ಹೋದರೆ ಹೊರಹೋಗಿ ಎನ್ನುತ್ತಿದ್ದಾರೆ. ಸಿಪಿಐ ಕಚೇರಿ ಸಿಬ್ಬಂದಿ ಮೂಲಕ ಬೆದರಿಕೆ ಒಡ್ಡುತ್ತಾರೆ ಎಂದು ಬೆಟ್ಟದಹಳ್ಳಿ ಗಣೇಶ್ ಸಭೆಯಲ್ಲಿ ಅಳಲು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು ಪೊಲೀಸರು ಠಾಣೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಬ್‌ಇನ್ಸ್ಪೆಕ್ಟರ್ ತಮ್ಮ ನಡೆ ಸರಿಪಡಿಸಿಕೊಳ್ಳಬೇಕು. ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಸತ್ಯಾಸತ್ಯತೆ ಪರಿಶೀಲಿಸಿ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ಪ್ರಮುಖ ಸರ್ಕಲ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸದ ಕಾರಣ ಗಲಾಟೆಗಳು ನಡೆದರೆ ಆರೋಪಿಗಳು ಪತ್ತೆಯಾಗುತ್ತಿಲ್ಲ. ಹೀಗಾಗಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸಿಪಿಐ ರಘುಪತಿ ಅವರಿಗೆ ಖಡಕ್ ಸೂಚನೆ ನೀಡಿದರು.

ಛಲವಾದಿ ಮಹಾಸಭಾ ಮುಖಂಡ ಲಿಂಗರಾಜು ಮಾತನಾಡಿ, ಪಟ್ಟಣದ ಹಲವೆಡೆ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಹಿಂದಿನ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಅಕ್ರಮ ಮದ್ಯ ಮಾರಾಟ ತಡೆಗಟ್ಟುತ್ತಿಲ್ಲ ಎಂದು ಸಭೆಯಲ್ಲಿ ಆರೋಪಿಸಿದರು. ಪ್ರತಿ ಬಾರಿ ನಡೆಯುವ ಸಭೆಗೆ ಅಬಕಾರಿ ಇಲಾಖೆ ಅಧಿಕಾರಿ ಬಾರದೆ ಸಲ್ಲದ ನೆಪ ಹೇಳಿಕೊಂಡು ಸಹಾಯಕ ಅಧಿಕಾರಿಯನ್ನು ಕಳುಹಿಸಲಾಗುತ್ತಿದೆ, ಇದರಿಂದ ಸೂಕ್ತ ಮಾಹಿತಿ ದೊರೆಯುತ್ತಿಲ್ಲ ಎಂದು ತಾಲೂಕು ಅಂಬೇಡ್ಕರ್ ವಾದ ಸಂಚಾಲಕ ದುಮ್ಮಿ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು. ಸೂಕ್ತ ತನಿಖೆ ನಡೆಸಿಕಾರ್ಮಿಕ ಇಲಾಖೆಯಲ್ಲಿ ಅರ್ಹರಿಗೆ ದೊರೆಯಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ದಲ್ಲಾಳಿಗಳ ಮೂಲಕ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ದಲಿತ ಮುಖಂಡರು ಕಾರ್ಮಿಕ ಇಲಾಖೆ ಅಧಿಕಾರಿ ವಿಜಯ್ ಕುಮಾರ್ ವಿರುದ್ದ ಹರಿಹಾಯ್ದರು. ತಾಪಂ ಇಒ ನೇತೃತ್ವದಲ್ಲಿ ಸಮಿತಿ ರಚಿಸಿ ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆ ನಡೆಸುವಂತೆ ಶಾಸಕ ಎ. ಮಂಜು ಸೂಚಿಸಿದರು.ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಇದ್ದರು.ಅರಕಲಗೂಡಿನಲ್ಲಿ ಬುಧವಾರ ನಡೆದ ಎಸ್ಸಿ ಎಸ್ಟಿ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಶಾಸಕ ಎ. ಮಂಜು ಮಾತನಾಡಿದರು. ಬಸವರೆಡ್ಡಪ್ಪ ರೋಣದ, ಅಶೋಕ್, ರಘುಪತಿ, ರವಿಕುಮಾರ್ ಇದ್ದರು.