ಸಾರಾಂಶ
ತಾಲೂಕಿನ ಮಾದಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತರ ರು. ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ನನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾದಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತರ ರು. ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ನನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಹೆಚ್ಚಿನ ತನಿಖೆಗಾಗಿ ಪೋಲಿಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಕೇಳಿದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಪ್ರಕಾಶ್ ನನ್ನು ಪೋಲಿಸ್ ವಶಕ್ಕೆ ನೀಡಲಾಗಿದೆ.ತಾಲೂಕಿನ ಕಸಬಾ ವ್ಯಾಪ್ತಿಯ ಮಾದಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾರ್ವಜನಿಕರು ಇಟ್ಟಿದ್ದ ₹೨ ಕೋಟಿ ೨೨ ಲಕ್ಷ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸಂಘದ ಸಿಇಒ ಪ್ರಕಾಶ್‌ನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಮಾದಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂರಾರು ಸದಸ್ಯರು ತಮ್ಮ ಹಣವನ್ನು ಠೇವಣಿ ಇಟ್ಟಿದ್ದರು. ಈ ಹಣವನ್ನು ವಿವಿಧ ಹಂತಗಳಲ್ಲಿ ಆರೋಪಿ ಪ್ರಕಾಶ ದುರುಪಯೋಗ ಪಡಿಸಿಕೊಂಡು ಠೇವಣಿದಾರರಿಗೆ ಸಕಾಲಕ್ಕೆ ಹಣ ಕೊಡದೆ ಸಬೂಬು ಹೇಳಿಕೊಂಡು ಓಡಾಡುತ್ತಿದ್ದನು ಎನ್ನಲಾಗಿದೆ. ಈತ ಸುಮಾರು ಎರಡು ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ. ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ವಂಚನೆ ಪ್ರಕರಣ ಬಯಲಿಗೆ ಬಂದಿತ್ತಾದರೂ ಸಹ ಆಡಿಟ್ ವರದಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ದೂರು ಸಲ್ಲಿಸುವುದು ತಡವಾಗಿತ್ತು. ಕಳೆದ ೧೫ ದಿನಗಳ ಹಿಂದೆ ಸಂಘದ ನಿರ್ದೇಶಕ ಉದಯ್ ಕುಮಾರ್ ದಾಖಲೆ ಸಹಿತ ಪೋಲಿಸರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್‌ನನ್ನು ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಸಂಗಮೇಶ ಮೇಟಿ ಆರೋಪಿಯನ್ನು ಅ. ೧೪ ರ ರಾತ್ರಿ ತುಮಕೂರಿನಲ್ಲಿ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.