ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿ ವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಇದ್ದು, ಇದನ್ನು ದಾನಿಗಳ ಮೂಲಕವೇ ಪಡೆದುಕೊಳ್ಳುವ ಅನಿವಾರ್‍ಯತೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಬೇಕಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಹೇಳಿದರು.

ತಾಲೂಕಿನ ಕೊತ್ತತ್ತಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ನೇಹಮಯಿ ಸೇವಾ ಟ್ರಸ್ಟ್ ವತಿಯಿಂದ ನಡೆದ ರಕ್ತದಾನ ಶಿಬಿರ ಮತ್ತು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ದಾನಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿ ವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಇದ್ದು, ಇದನ್ನು ದಾನಿಗಳ ಮೂಲಕವೇ ಪಡೆದುಕೊಳ್ಳುವ ಅನಿವಾರ್‍ಯತೆ ಎದುರಾಗಿದೆ ಎಂದರು.

ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಎಷ್ಟೋ ಮಂದಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಪಘಾತದ ಗಾಯಾಳುಗಳು ಮೃತರಾಗುತ್ತಿದ್ದಾರೆ. ಅತ್ಯಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಅತೀ ಅಗತ್ಯ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವಂತೆ ಸಲಹೆ ನೀಡಿದರು.

ಒಬ್ಬ ರಕ್ತದಾನಿ ನೀಡುವ ರಕ್ತದಿಂದ ಮೂರು ಮಂದಿ ಪ್ರಾಣ ಉಳಿಸಬಹುದು. ರಕ್ತವನ್ನು ಪರ್‍ಯಾಯವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದಾನ ಮಾಡಿದರಷ್ಟೇ ರಕ್ತದ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಯುವಜನತೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಾವಶ್ಯಕವಾಗಿದೆ. ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿಯೂ ಸಹಕಾರಿಯಾಗಿದೆ. ಜೊತೆಗೆ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದಲೇ ನೋಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಈ ವೇಳೆ ಗ್ರಾಮದ ಮುಖಂಡರಾದ ಕುಮಾರ್, ಯೋಗೇಶ್, ನಾಗರಾಜು, ಮಹೇಶ್, ಜವರೇಗೌಡ, ಕುಳ್ಳಪ್ಪ, ವೆಂಕಟೇಶ್, ಮೋಹನ್, ಮಹೇಶ್, ಸಚಿನ್, ರಕ್ಷಿತ್, ಕಾರ್ತಿಕ್, ಅಕ್ಷಯ್, ಮನೋಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.