ಸಾರಾಂಶ
ಬೀದರ್ ನಗರ ಸಭೆ ಪೌರಾಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರ ಸಭೆಯವರು ಮುಟೇಶನ್ ಮಾಡುವಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ. ಇವರು ಮುಟೇಶನ್ ಥಂಬ್ ಸ್ಕ್ಯಾನರ್‌ನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿ ಒಂದು ಮುಟೇಶನ್‌ಗೆ 30 ರಿಂದ 40 ಸಾವಿರ ರು. ಲಂಚ ಪಡೆಯುತ್ತಿದ್ದಾರೆ ಎಂದು ಜನ ಸಾಮಾನ್ಯರು ದೂರುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟಿಸಿತು.ಈ ಕುರಿತು ಪೌರಾಡಳಿತ ಸಚಿವ ರಹೀಂ ಖಾನ್‌ಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ, ಹೊರಗುತ್ತಿಗೆ ಆಧಾರದ ಮೇಲೆ ಕೇಲಸ ಮಾಡುವ ಕೂಲಿ ಕಾರ್ಮಿಕ/ಪೌರ ಕಾರ್ಮಿಕರು ಇವರಿಗೆ ಸುಮಾರು 06 ತಿಂಗಳುಗಳಿಂದ ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಿಲ್ಲ, ಇವರು ಜೀವನ ನಡೆಸುವುದೇ ಬಹಳಷ್ಟು ಕಷ್ಟ ಆಗುತ್ತಿದೆ, ಇದನ್ನು ನಮಗೆ ಬಂದು ಹೇಳಿದಾಗ ನಾವುಗಳು ಪೌರಾಯುಕ್ತರಿಗೆ ಕೆಳಲು ಹೋದಾಗ ಹಾರಿಕೆ ಉತ್ತರ ಕೊಡುವುದರ ಮುಖಾಂತರ ಕಚೇರಿಯಿಂದ ಹೊರಗಡೆ ಎದ್ದು ಹೊಗುತ್ತಾರೆ, ಹಾಗೂ ಎಸ್‌ಟಿಪಿ/ಐಎಸ್‌ಬಿರವರಿಗೆ ಬರಬೇಕಾದ ಅನುದಾನ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಅಂಬೇಡ್ಕರ್ ವಸತಿ ನಿಲಯ, ಮತ್ತು ಬಸವೇಶ್ವರ ವಸತಿ ನಿಲಯ, ಫಲಾನುಭವಿಗಳ ಹೆಸರಿಗೆ ಜಿಪಿಎಸ್ ನಂಬರ ಬಂದಿರುವ ಹಣ ಬಿಡುಗಡೆ ಮಾಡಿಕೊಂಡು ಫಲಾನುಭಿವಿಗಳಿಗೆ ಮುಟ್ಟಿರುವುದಿಲ್ಲ, ಈ ಹಣವನ್ನು ದುರ್ಬಳಕೆಯಾಗಿರುತ್ತದೆ ಇದು ಕೂಡ ಸಮಗ್ರ ತನಿಖೆ ನಡೆಸಬೇಕು. ಹೀಗೆ ಅನೇಕ ಕಡು ಬಡ ಜನರಿಗೆ ಯಾವುದೇ ಸರ್ಕಾರದ ಯೋಜನೆಯಡಿಯಲ್ಲಿ ಬರುವ ಸೌಲಭ್ಯವನ್ನು ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಸರ್ಕಾರದ ಸೌಲಭ್ಯ ನೀಡುವಲ್ಲಿ ವಿಫಲರಾಗಿರುತ್ತಾರೆ. ಎಂದು ಆರೋಪಿಸಿದ್ದಾರೆ.ಅದೇ ರೀತಿ ಸುಮಾರು ವರ್ಷಗಳಿಂದ ಟೆಂಡರ್ ಆಗಲಾರದೆ ಮಳಿಗೆಗಳು ಬೇರೆಯವರ ಹೆಸರಿಗೆ ಇಲ್ಲಿಯವರೆಗೆ ಮಾಡಲಾರದೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಆದ್ದರಿಂದ ಪೌರಾಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ದಿಂದ-ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ಈ ವೇಳೆ ವಿಭಾಗೀಯ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಸಂಗಮ, ಮಹಿಳಾ ಜಿಲ್ಲಾ ಸಂಚಾಲಕ ಲಕ್ಷ್ಮೀ ದಂಡಿ, ಅಂಬೇಡ್ಕರ್ ಪಿ.ಬೌದ್ದೆ, ಸಂದೇಶ ಭಾವಿಕಟ್ಟಿ, ಗೌತಮ ಸೇಡೋಳ, ವಿಜಯ ಸಾಮ್ರಾಟ, ದೇವರಾಜ ಡಾಕುಳಗಿ, ವಿಶಾಲ ಹೊನ್ನಾ, ಜೈ ಭೀಮ ಶರ್ಮಾ, ದೀಪಕ ದೊಡ್ಡಿ , ಗೌತಮ ಪ್ರಸಾದ, ತುಕಾರಾಮ ಭೂರೆ, ಸಂದಿಪ ಕಟ್ಟಿಮನಿ, ಗೋವಿಂದ ಬಡಿಗೆ, ಗೌತಮ ದೇಶಪಾಂಡೆ, ಪ್ರವೀಣ ಮೋಡಾ, ವೀನಿತ ಗಿರಿ ಉಪಸ್ಥಿತರಿದ್ದರು.