ಸಾರಾಂಶ
ಶಿರಸಿ: ಉತ್ತರಕನ್ನಡ ಜಿಲ್ಲೆಯು ಅಭಿವೃದ್ಧಿಯಾಗಲು ಸಹಕಾರಿ ಕ್ಷೇತ್ರವು ಮುಖ್ಯ ಕಾರಣ. ಸಹಕಾರಿ ಕ್ಷೇತ್ರದಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ. ಅವ್ಯವಹಾರ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.ಭಾನುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿರುವುದು ರೈತರು ಹಾಗೂ ಬಡವರ ಹಣ. ಆ ಹಣವನ್ನು ಅವ್ಯವಹಾರ ನಡೆಸಿ, ಗುಳುಂ ಮಾಡಿದವರ ಮೇಲೆ ಮುಲಾಜಿಲ್ಲದೇ ಕಾನೂನಿನ ಪ್ರಕಾರ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಯಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಸುಮಾರು ₹೧ ಸಾವಿರ ಕೋಟಿ ಹಣ ಬಿಡುಗಡೆ ಬಾಕಿ ಇದೆ. ಹಂತ- ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಬಜೆಟ್ ಮೀರಿ ಕಾಮಗಾರಿಗೆ ನಡೆಸಿದ್ದರಿಂದ ಹಣಕ್ಕೆ ತೊಂದರೆಯಾಗಿದೆ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಅಡ್ಡಗಾಲು ಹಾಕಿದರೆ ಅಂತಹುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಅಭಿವೃದ್ಧಿಗೆ ಒತ್ತು: ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಒತ್ತು ನೀಡಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾವುದರ ಜತೆಗೆ ಆರ್ಥಿಕ ಸಂಪನ್ಮೂಲವೂ ಅಭಿವೃದ್ಧಿಯಾಗುತ್ತದೆ. ಈ ನಿಟ್ಟನಿಲ್ಲಿ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕಾನೂನು ರಚನೆ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಮಲೆನಾಡು ಭಾಗದಲ್ಲಿ ಅರಣ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇವೆ ಎಂದರು.
ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಮುಕ್ತಾಯಗೊಳ್ಳಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ಸದ್ಯದಲ್ಲಿ ಮುಕ್ತಾಯಗೊಳ್ಳಲಿದ್ದು, ಸಾಗರ- ಹೊನ್ನಾವರ ಹೆದ್ದಾರಿ ಅಭಿವೃದ್ಧಿಗೂ ಹಣ ಮಂಜೂರಿಯಾಗಿ ಟೆಂಡರ್ ಆಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರಿಯಾಗಿದೆ. ಜಲಪಾತಗಳಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಲೈಫ್‌ಗಾರ್ಡ್ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಡಳಿತದ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.ಹೆಬ್ಬಾರ್ ನಮ್ಮವರುಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನಮ್ಮ ಜತೆ ಇದ್ದಾರೆ. ಬಿಜೆಪಿಯಿಂದ ೨ ಕಾಲು ತೆಗೆದು ಹೊರಗಿಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವುದು ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ನೋಡಿ ತಿಳಿದಿದ್ದೇನೆ. ಒಳ್ಳೆಯ ದಿನ ನೋಡಿ, ನಮ್ಮ ಜತೆ ಬರಲಿದ್ದಾರೆ. ನಾವು ಮುಹೂರ್ತ ನೋಡಿ, ಆಹ್ವಾನ ನೀಡಿದ್ದೇವೆ. ಪುರೋಹಿತರ ಬಳಿ ಒಳ್ಳೆಯ ದಿನ ನೋಡಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹಾಸ್ಯ ಚಟಾಕಿ ಹಾರಿಸಿದರು.ವೈದ್ಯರ ಕೊರತೆಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೇ ಉಳಿದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಸರ್ಕಾರಿ ಸೇವೆಗೆ ಬರಲಿಚ್ಛಿಸುವ ಎಂಬಿಬಿಎಸ್ ಹಾಗೂ ಎಂಡಿ ಪದವೀಧರರಿಗೆ ಸರ್ಕಾರ ಶೀಘ್ರ ನೇಮಕ ಮಾಡಿಕೊಳ್ಳುತ್ತದೆ. ಆದರೆ ಸರ್ಕಾರಿ ಸೇವೆಗೆ ಬರಲು ವೈದ್ಯರೇ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ನಮ್ಮ ಜಿಲ್ಲೆಗೆ ವೈದ್ಯರು ಬರಲು ನಿರಾಸಕ್ತಿ ತೋರಿಸುತ್ತಾರೆ. ಯಾಕೆಂದು ತಿಳಿಯುತ್ತಿಲ್ಲ. ಈ ಕಾರಣದಿಂದ ಇರುವ ವೈದ್ಯರನ್ನು ವರ್ಗಾವಣೆ ಮಾಡದಂತೆ ವೈದ್ಯಕೀಯ ಶಿಕ್ಷಣ ಸಚಿವರ ಬಳಿ ವಿನಂತಿಸಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.