ಅಪ್ರಾಪ್ತೆಯನ್ನು ಮನೆವರೆಗೂ ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸಿದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಯೊಬ್ಬನಿಗೆ ಮಹಿಳೆಯರು ಹಾಸ್ಟೆಲ್‌ಗೇ ಹೋಗಿ ಕಪಾಳಮೋಕ್ಷ ಮಾಡಿ, ಬುದ್ಧಿವಾದ ಹೇಳಿದ ಘಟನೆ ನಗರದಲ್ಲಿ ನಡೆದಿದೆ.
- ಅಪ್ರಾಪ್ತೆ ಮನೆವರೆಗೂ ಹೋಗಿ ಚುಡಾಯಿಸಿದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಅಪ್ರಾಪ್ತೆಯನ್ನು ಮನೆವರೆಗೂ ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸಿದ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಯೊಬ್ಬನಿಗೆ ಮಹಿಳೆಯರು ಹಾಸ್ಟೆಲ್‌ಗೇ ಹೋಗಿ ಕಪಾಳಮೋಕ್ಷ ಮಾಡಿ, ಬುದ್ಧಿವಾದ ಹೇಳಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಶಂಕರ ವಿಹಾರ್ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಇದ್ದುಕೊಂಡು ಓದುತ್ತಿರುವ ವಿದ್ಯಾರ್ಥಿ ಸ್ಥಳೀಯ ಮಹಿಳೆಯರಿಂದ ಕಪಾಳಮೋಕ್ಷ ಮಾಡಿಸಿಕೊಂಡವನು.ಹಾಸ್ಟೆಲ್‌ನಲ್ಲಿ ಓದುತ್ತಿರುವ ಅನೇಕ ಬಾಲಕರು ನಿತ್ಯ ಸ್ಥಳೀಯ ಅಪ್ರಾಪ್ತೆಯರು, ಯುವತಿಯರು, ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ. ಈಗ ಕಿಡಿಗೇಡಿ ವಿದ್ಯಾರ್ಥಿಯೊಬ್ಬ ಅಪ್ರಾಪ್ತೆಯ ಮನೆವರೆಗೂ ಹಿಂಬಾಲಿಸಿಕೊಂಡು ಹೋಗಿ, ಚುಡಾಯಿಸಿದ್ದಾನೆ. ಇದಕ್ಕೆ ಕಡಿವಾಣ ಹಾಕಬೇಕೆಂಬ ಕಾರಣಕ್ಕೆ ಹಾಸ್ಟೆಲ್ ಆವರಣಕ್ಕೆ ಬಂದ ಮಹಿಳೆಯರು ಆತನಿಗೆ ಕಪಾಳಮೋಕ್ಷ ಮಾಡಿ, ವಾರ್ಡನ್, ಅಲ್ಲಿನ ಸಿಬ್ಬಂದಿಗೂ ಎಚ್ಚರಿಕೆ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಆದರೆ, ಇಲ್ಲಿ ದಾಖಲಾಗಿರುವ ಕೆಲ ಕಿಡಿಗೇಡಿಗಳಿಂದಾಗಿ ಸ್ಥಳೀಯ ಮಹಿಳೆಯರು, ಯುವತಿಯರು, ಬಾಲಕಿಯರು, ಅಪ್ರಾಪ್ತೆಯರಿಗೆ ಇನ್ನಿಲ್ಲದಷ್ಟು ತೊಂದರೆ ಆಗುತ್ತಿದೆ ಎಂದು ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಹಾಸ್ಟೆಲ್ ಅನ್ನು ಈ ಭಾಗದಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕು. ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳು ಸ್ಥಳೀಯ ಅಪ್ರಾಪ್ತೆಯರು, ಬಾಲಕಿಯರು, ಅಪ್ರಾಪ್ತೆಯರು, ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಾ, ಚುಡಾಯಿಸುವುದನ್ನು ಮಾಡುತ್ತಿದ್ದಾರೆ. ಮದ್ಯಪಾನ ಮಾಡಿ, ಹಾಸ್ಟೆಲ್ ಹೊರಗಡೆ ತಡರಾತ್ರಿವರೆಗೂ ಸುತ್ತಾಡುತ್ತಿದ್ದಾರೆ. ಇವರಿಗೆಲ್ಲ ಹೇಳುವವರು, ಕೇಳುವವರೇ ಇಲ್ಲದಂತೆ ವರ್ತಿಸುತ್ತಾರೆ ಎಂದು ಆರೋಪಿಸಿದರು.
ವಾರ್ಡನ್ ಸಹ ಹಾಸ್ಟೆಲ್‌ನಲ್ಲಿ ಇರುವುದೇ ಇಲ್ಲ. ಹಾಗಾಗಿ ಇಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಯಾರ ಅಂಜಿಕೆಯೂ ಇಲ್ಲವಾಗಿದೆ. ಇನ್ನೂ ಓದುವ ಹುಡುಗರು ಕುಡಿತ, ಇತರೆ ದುಶ್ಚಟಗಳಿಗೆ ತುತ್ತಾಗುತ್ತಿದ್ದಾರೆ. ಇಂತಹವರಿಂದಾಗಿ ತಮ್ಮ ಭಾಗದಲ್ಲಿ ಅಪ್ರಾಪ್ತೆಯರು, ಬಾಲಕಿಯರು, ಯುವತಿಯರು, ಹೆಣ್ಣುಮಕ್ಕಳ ನೆಮ್ಮದಿಗೆ ಭಂಗಬಂದಿದೆ ಎಂದು ತಿಳಿಸಿದರು.ತಕ್ಷಣವೇ ಇಲ್ಲಿರುವ ಹಾಸ್ಟೆಲ್ ಅನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಶಂಕರ ವಿಹಾರ ಬಡಾವಣೆ ನಿವಾಸಿಗಳು ವಿಶೇಷವಾಗಿ ಹೆಣ್ಣುಮಕ್ಕಳು, ಬಾಲಕಿಯರು, ಯುವತಿಯರ ನೆಮ್ಮದಿಗೆ ಭಂಗ ತರುತ್ತಿರುವ ಇಂತಹ ಕಿಡಿಗೇಡಿಗಳಿರುವ ಹಾಸ್ಟೆಲ್ ನಮ್ಮ ಭಾಗದಲ್ಲಿ ಇರುವುದೇ ಬೇಡ ಎಂಬುದಾಗಿ ಸ್ಥಳೀಯ ಮಹಿಳೆಯರು ಘೋಷಣೆ ಕೂಗಿದರು.
ಅಪ್ರಾಪ್ತೆಯನ್ನು ಚುಡಾಯಿಸುತ್ತಾ, ಮನೆವರೆಗೂ ಬೆನ್ನುಹತ್ತಿದ್ದ ಕಿಡಿಗೇಡಿ ವಿದ್ಯಾರ್ಥಿಗೆ ಮಹಿಳೆಯರು ಕಪಾಳಮೋಕ್ಷ ಮಾಡುವ ವೀಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.- - -
-(ಫೋಟೋಗಳಿವೆ)