ಶಾಲೆ ನೀರಿನ ಟ್ಯಾಂಕ್‌ಗೆ ಕಳೆನಾಶಕ ಹಾಕಿದ ಕಿಡಿಗೇಡಿಗಳು

| Published : Aug 01 2025, 12:00 AM IST

ಸಾರಾಂಶ

ಶಾಲೆಯ ಆವರಣದಲ್ಲಿ ಮದ್ಯಪಾನ ನಡೆಸಿ ನೀರಿನ ಟ್ಯಾಂಕ್‌ಗೆ ಕಳೆನಾಶಕವನ್ನು ಹಾಕಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಹೊಸನಗರ: ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯದಿಂದಾಗಿ ಮಕ್ಕಳ ಜೀವ ಅಪಾಯಕ್ಕೆ ಸಿಲುಕಿಸಿದೆ.

ಶಾಲೆಯ ಆವರಣದಲ್ಲಿ ಮದ್ಯಪಾನ ನಡೆಸಿ ನೀರಿನ ಟ್ಯಾಂಕ್‌ಗೆ ಕಳೆನಾಶಕವನ್ನು ಹಾಕಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇದ್ದು, ಎರಡಕ್ಕೂ ಕಿಡಿಗೇಡಿಗಳು ಕಳೆನಾಶಕ ಮಿಶ್ರಣ ಮಾಡಿದ್ದಾರೆ. ಒಂದರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಳೆ ನಾಶಕ ಸಿಂಪಡಿಸಲಾಗಿತ್ತು, ಆದರೆ ಅದರಲ್ಲಿ ನೀರು ಕಡಿಮೆ ಇದ್ದ ಕಾರಣ ಇನ್ನೊಂದು ಸಿಂಟೆಕ್ಸ್ ಟ್ಯಾಂಕ್ ನಿಂದ ನೀರನ್ನು ಬಳಸಲಾಗುತ್ತಿತ್ತು. ಮಕ್ಕಳು ಕೈತೊಳೆಯುವ ಸಮಯದಲ್ಲಿ ವಾಸನೆ ಬಂದು ಮಕ್ಕಳಲ್ಲಿ ಅನುಮಾನ ಮೂಡಿ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಆ ನಂತರ ಕೈತೊಳೆದ ನಾಲ್ಕು ಮಕ್ಕಳು ಅಸ್ವಸ್ಥರಾದ ಹಿನ್ನಲೆಯಲ್ಲಿ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟ ವಶಾತ್ ಮಕ್ಕಳ ಆರೋಗ್ಯ ಈಗ ಸ್ಥಿರವಾಗಿದೆ.

ಘಟನೆಯ ಮಾಹಿತಿ ದೊರೆತ ತಕ್ಷಣ ತಹಸೀಲ್ದಾರ್ ರಶ್ಮಿ ಹಾಲೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು , ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರ , ಹೊಸನಗರ ಪಿಎಸ್‌ಐ ಶಂಕರ್ ಗೌಡ ಕೂಡ ಇದ್ದರು. ಸ್ಥಳೀಯ ಜನರ ಜೊತೆ ಮಾತನಾಡಿ, ಶಾಲೆಯ ಪರಿಸರವನ್ನು ಪರಿಶೀಲಿಸಿದರು ಹಾಗೂ ಮುಂದಿನ ಕ್ರಮಗಳ ಬಗ್ಗೆ ತಿಳಿಸಿದರು.

ಈ ಘಟನೆ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿರುವುದು ನಿಸ್ಸಂಶಯ. ಗ್ರಾಮಸ್ಥರು ಹಾಗೂ ಪೋಷಕರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಗುರುತು ಹಿಡಿಯುವಲ್ಲಿ ತನಿಖೆ ಮುಂದುವರೆದಿದೆ.