ನಿಧಿ ಆಸೆಗಾಗಿ ಭೂಮಿ ಅಗೆದು ಬರಿಗೈಲಿ ಓಡಿಹೋದ ದುಷ್ಕರ್ಮಿಗಳು

| Published : Jul 12 2024, 01:39 AM IST

ಸಾರಾಂಶ

ಯಾರೋ ಅಪರಿಚಿತರು ನಿಧಿ ಇದೆ ಎನ್ನುವ ಸಂಶಯದಲ್ಲಿ ಈ ಕೃತ್ಯ ನಡೆಸಿರಬಹುದು ಎಂದು ತಿಳಿದು ಮಾಲೀಕ ಎಂ.ಎನ್.ವೆಂಕಟರವಣಪ್ಪ ಕೆಂಚರ‍್ಲಹಳ್ಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೇಳೂರು: ನಿಧಿ ಆಸೆಗಾಗಿ ದುಷ್ಕರ್ಮಿಗಳು ಭೂಮಿ ಅಗೆದು ಓಡಿ ಹೋಗಿರುವ ಘಟನೆ ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ನಡೆದಿದೆ. ಚಿಲಕಲನೇರ್ಪು ಗ್ರಾಮದ ಎಂ.ಎನ್. ವೆಂಕಟರವಣಪ್ಪ ಎಂಬವರ ಜಮೀನಿನಲ್ಲಿ ನಿಧಿಯಿರುವ ಗಾಳಿ ಸುದ್ದಿ ಕೇಳಿ ಅದನ್ನು ತೆಗೆಯಲು ಬಂದು ಯಾರೋ ಅಪರಿಚಿತರು ಬುಧವಾರ ರಾತ್ರಿ ವಾಮಾಚಾರ ನಡೆಸಿ ಭೂಮಿಯನ್ನು ಅಗೆದು ನಿಧಿ ಹುಡುಕಾಟ ನಡೆಸಿರುವ ಬಗ್ಗೆ ಕುರುಹುಗಳು ಕಂಡುಬಂದಿವೆ.

ಜಮೀನು ಮಾಲೀಕ ಗುರುವಾರ ಬೆಳಗ್ಗೆ ಹೊಲಕ್ಕೆ ಹೋದಾಗ ತೆಂಗಿನ ಕಾಯಿ ಸೇರಿದಂತೆ ಮೊಟ್ಟೆ ಒಡೆದು,ಕೋಳಿ ಕೊಯ್ದು, ಕುಂಕುಮ ಮಿಶ್ರಿತ ಲಿಂಬೆ ಹಣ್ಣನ್ನು ಇಟ್ಟು ಪೂಜೆ ಮಾಡಿರುವುದು ಹಾಗೂ ಜೆಸಿಬಿ ಮೂಲಕ ಭೂಮಿಯನ್ನು ಸುಮಾರು ಹತ್ತು ಅಡಿ ಆಳವಾದ ಗುಂಡಿಯನ್ನು ಅಗೆದು ಹುಡುಕಾಟ ನಡೆಸಿದ ಕುರುಹುಗಳು ಕಂಡುಬಂದಿವೆ.

ಯಾರೋ ಅಪರಿಚಿತರು ನಿಧಿ ಇದೆ ಎನ್ನುವ ಸಂಶಯದಲ್ಲಿ ಈ ಕೃತ್ಯ ನಡೆಸಿರಬಹುದು ಎಂದು ತಿಳಿದು ಮಾಲೀಕ ಎಂ.ಎನ್.ವೆಂಕಟರವಣಪ್ಪ ಕೆಂಚರ‍್ಲಹಳ್ಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಜಮೀನು ಚಿಲಕಲನೇರ್ಪು ಗ್ರಾಮದ ಎಂ.ಎನ್.ವೆಂಕಟರವಣಪ್ಪ ಎಂಬುವರಿಗೆ ಸೇರಿದೆ. ನಿಧಿಗಾಗಿ ಇಲ್ಲಿ ಭೂಮಿ ಅಗೆದದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ನಿಧಿಗಳ್ಳರು ಪೂಜೆ ಸಲ್ಲಿಸಿ, ತಗ್ಗುಗಳನ್ನು ತೋಡಿ ಹೋಗಿದ್ದಾರೆ ಎಂದು ಪಕ್ಕದ ಜಮೀನು ಮಾಲೀಕ ರಾಮು ತಿಳಿಸಿದರು.

ನಮ್ಮ ಜಮೀನು ಗಡಿಭಾಗದ ಆಂಧ್ರದ ಹಾಗೂ ಚಿಲಕಲನೇರ್ಪು ಗ್ರಾಮದ ಸರಹದ್ದಿನಲ್ಲಿರುವುದರಿಂದ ಈ ಜಮೀನಿನಲ್ಲಿ ನಿಧಿ ಇದೆ ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ಇದನ್ನು ನಂಬಿದ ದುಷ್ಕರ್ಮಿಗಳು ನಿಧಿಯಾಸೆಗಾಗಿ ಇಲ್ಲಿ ಭೂಮಿ ಅಗೆದಿದ್ದಾರೆ ಎಂದು ಮಾಲೀಕ ಎಂ.ಎನ್.ವೆಂಕಟರವಣಪ್ಪ ಅವರು ಹೇಳಿದರು.

ನಿಧಿ ಆಸೆಗಾಗಿ ಭೂಮಿ ಅಗೆದ ದುಷ್ಕರ್ಮಿಗಳನ್ನು ಪತ್ತಿಹಚ್ಚಿ ಕೂಡಲೇ ಬಂಧಿಸಬೇಕು ಎಂದು ಅಕ್ಕಪಕ್ಕದ ಜಮೀನುಗಳ ರೈತರು ಆಗ್ರಹಿಸಿದ್ದಾರೆ.