। ಕೂಲಿ ಹಣದ ವಿಚಾರ ಮಾಲೀಕ-ಕಾರ್ಮಿಕನ ಗಲಾಟೆ । ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಮೂಡಿಗೆರೆಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ನಡೆದ ಗಲಾಟೆಯಲ್ಲಿ ತೋಟದ ಮಾಲೀಕನ ಸಹೋದರ ನಡೆಸಿದ ಫೈರಿಂಗ್‌ನಿಂದ ಆಸ್ಸಾಂ ಮೂಲದ ಕಾರ್ಮಿಕನ ಮಗು ತಲೆಗೆ ಗುಂಡು ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸದ್ಯ ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿದೆ.ಕಳೆದ ಆರು ದಿನಗಳ ಹಿಂದೆಯಷ್ಟೇ ಜಗದೀಶ್ ಗೌಡ ತೋಟಕ್ಕೆ ಕೂಲಿ ಕೆಲಸಕ್ಕೆ ಆಗಮಿಸಿದ್ದ ಅಸ್ಸಾಂ ಮೂಲದ ಕಾರ್ಮಿಕರನ್ನು ತೋಟದ ಮಾಲೀಕರ ಸಹೋದರ ಪ್ರಭಾಕರ್ ಗೌಡ ಅವರ ಕೂಲಿ ಲೈನ್‌ನಲ್ಲಿ ನೆಲೆಸಲು ವ್ಯವಸ್ಥೆ ಮಾಡಲಾಗಿತ್ತು.
ಪ್ರತಿ ಕಾರ್ಮಿಕರಿಗೆ ದಿನಕ್ಕೆ₹ 400 ಕೂಲಿ ನಿಗದಿ ಪಡಿಸಲಾಗಿತ್ತು. ಶುಕ್ರವಾರ ವಾರದ ಸಂತೆ ಆಗಿದ್ದರಿಂದ ಕಾರ್ಮಿಕರು ಕೂಲಿ ಪಡೆಯುವುದಕ್ಕೆ ತೋಟದ ಮಾಲೀಕ ಜಗದೀಶ್ ಗೌಡ ಬಳಿ ಹೋಗಿದ್ದಾರೆ.
ಈ ವೇಳೆ ತೋಟದ ಮಾಲೀಕ ₹350 ಮಾತ್ರ ಕೂಲಿ ನೀಡಿ, ಬಾಕಿ ₹50 ಆ ಮೇಲೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಕಾರ್ಮಿಕರು ಈಗಲೇ ಒಟ್ಟು ₹400 ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ಕೆಲಸ ಮಾಡು ವುದಿಲ್ಲ ಎಂದು ಅಲ್ಲಿಂದ ಹೊರಡಲು ಅನುವಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಕಾರ್ಮಿಕರು ತೋಟದ ಮಾಲೀಕರ ಮನೆಯಿಂದ ಸುಮಾರು 300 ಮೀಟರ್ ದೂರ ತೆರಳಿದ್ದಾರೆ.
ಈ ವೇಳೆ ತೋಟದ ಮಾಲೀಕನ ಸಹೋದರ ಪ್ರಭಾಕರ್ ಗೌಡ ಕೋವಿ ತೆಗೆದುಕೊಂಡು ಬಂದು ಪೈರಿಂಗ್ ಮಾಡಿದ್ದು ಗುರಿ ತಪ್ಪಿದ ಕಾರಣಕ್ಕೆ ಗುಂಡು ನೆಲಕ್ಕೆ ತಗುಲಿ ನಂತರ ಕಾರ್ಮಿಕನ ಮಗು ತಲೆಯ ಭಾಗಕ್ಕೆ ಬಡಿದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.ಮಗು ಆಸ್ಪತ್ರೆಗೆ ದಾಖಲು
ಗಾಯಗೊಂಡ ಮಗುವನ್ನು ತಕ್ಷಣವೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
-- ಬಾಕ್ಸ್--ತೋಟದ ಮಾಲೀಕ ಮತ್ತು ಸಹೋದರ ಪರಾರಿ
ಘಟನೆ ನಡೆಯುತ್ತಿದ್ದಂತೆ ತೋಟದ ಮಾಲೀಕ ಜಗದೀಶ್ ಗೌಡ ಹಾಗೂ ಆತನ ಸಹೋದರ ಪ್ರಭಾಕರ್ ಗೌಡ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಪೋಟೊ 1: ಪೊಲೀಸರಿಂದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಯಿತು.ಪೋಟೊ 2: ಗಾಯಗೊಂಡ ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
(ಫೋಟೋ ಬಳಸಿ)