ಸಾರಾಂಶ
ಕಲಘಟಗಿ:
ತಾಲೂಕಿನ ಮಿಶ್ರಿಕೋಟಿ ಗ್ರಾಮದ ಪ್ರಮುಖ ರಸ್ತೆಯಾದ ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿ ರಸ್ತೆ ಸಂಪರ್ಕಿಸುವ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಗ್ರಾಮಸ್ಥರು ಕರೆ ಕೊಟ್ಟಿದ್ದ ಮುಷ್ಕರಕ್ಕೆ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಕಳೆದ ಒಂದು ದಶಕದಿಂದ ಗ್ರಾಮದ ಪ್ರಮುಖ ರಸ್ತೆ ಸುಧಾರಣೆ ಕಾಣದಿರುವುದು, ಹಲವು ಸಮಸ್ಯೆಗಳಿಗೆ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೇಸತ್ತು ಬುಧವಾರ ಬಂದ್‌ಗೆ ಕರೆ ನೀಡಿದ್ದರು. ಮುಷ್ಕರಕ್ಕೆ ಸ್ಪಂದಿಸಿದ ಗ್ರಾಮಸ್ಥರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ-ಕಾಲೇಜು ಹೊರತು ಪಡಿಸಿ ಎಲ್ಲವೂ ಬಂದ್ ಆಗಿದ್ದವು.
ಗ್ರಾಮದ ಪ್ಯಾಟಿ ಬಸವೇಶ್ವರ ದೇವಾಲಯದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿ ನೀಲವ್ವನ ಮಡ್ಡಿ, ಬಾಪೂಜಿ ಕಾಲನಿ, ಹೊರಕೇರಿ, ಮನಗುಂಡ್ಡಿ ಓಣಿ, ಸುಣಗಾರ ಓಣಿ, ಜಾಡಗೇರಿ ಓಣಿ ಹಾಗೂ ಮಧ್ಯಾಹ್ನ ಓಣಿಯಿಂದ ಪುನಃ ಪ್ಯಾಟಿ ಬಸವೇಶ್ವರ ದೇವಾಲಯಕ್ಕೆ ಬಂದು ಸಮಾರೋಪಗೊಂಡಿತು.ಈ ವೇಳೆ ಗ್ರಾಮಸ್ಥ ಮುತ್ತು ಪಾಟೀಲ ಮಾತನಾಡಿ, ದಶಕ ಕಳೆದರೂ ರಸ್ತೆ ಕಾಮಗಾರಿ ಮಾಡದ ಅಧಿಕಾರಿ, ಗುತ್ತಿಗೆದಾರರ ವರ್ತನೆಗೆ ಬೇಸತ್ತು ಗ್ರಾಮದ ಯುವಕರು, ಹಿರಿಯರು ಬೀದಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ, ಸಚಿವರಿಗೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಗ್ರಾಮದ ಪ್ರಮುಖ ರಸ್ತೆ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಿಶ್ರಿಕೋಟಿಯಿಂದ ಹುಬ್ಬಳಿಗೆ ತೆರಳುವ ಮುಖ್ಯ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದೇ ರಸ್ತೆಯು ಸಂಪೂರ್ಣ ಹಾಳಾಗಿದೆ. ಸಣ್ಣವಾಹನ ಓಡಾಡಿದರೂ ಅಕ್ಕ-ಪಕ್ಕದ ಮನೆಗಳಿಗೆ ಧೂಳು ಆವರಿಸುತ್ತದೆ. ಇದರಿಂದಾಗಿ ವೃದ್ಧರು, ಮಕ್ಕಳಲ್ಲಿ ಚರ್ಮ ರೋಗ ಹಾಗೂ ಶ್ವಾಸಕೋಶದ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ಕಾಮಗಾರಿ ಆರಂಭಿಸುವ ವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಕುಳಿತು ಘೋಷಣೆ ಕೂಗಿದರು. ನಂತರ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪರಿಣಾಮ ವಾಹನಗಳು ಓಡಾಡಲು ಪರದಾಡುವಂತಾಯಿತು. ಸ್ಥಳಕ್ಕೆ ಆಗಮಿಸಿದ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನಾಕಾರರು ಮುಷ್ಕರ ಕೈಬಿಟ್ಟರು.
ಈ ವೇಳೆ ರೈತಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ಗ್ರಾಮಸ್ಥರಾದ ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕರ, ನಾಗೇಂದ್ರ ಲಂಗೋಟಿ, ವಿಠ್ಠಲ ಮಜ್ಜಿಗಿ, ಬಸು ಹೆಬ್ಬಳ್ಳಿ, ತವನಪ್ಪ ಮನಸಾಲಿ, ಪ್ರಕಾಶ ತುಕಪ್ಪನವರ, ಮಂಜುನಾಥ ವಾವಾಳ, ಆನಂದ ದಾನಪ್ಪನವರ, ಗುರುಸಿದ್ದಯ್ಯ, ಗೋಪಾಲ ಮಾಯನವರ, ಅಜ್ಜಪ್ಪ ಮುದೇನವರ ಸೇರಿದಂತೆ ಹಲವರಿದ್ದರು.