ಕಾಗವಾಡ ಕ್ಷೇತ್ರದಲ್ಲಿ ದುರಾಡಳಿತ ತಾಂಡವ

| Published : May 05 2024, 02:02 AM IST

ಸಾರಾಂಶ

ಅನಂತಪುರ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕಾಗವಾಡ ಕ್ಷೇತ್ರದಲ್ಲಿ ದುರಾಡಳಿತ ತಾಂಡವಾಡುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಅನೇಕ ಕೊಲೆ, ಸುಲಿಗೆಗಳು, ಮೋಸದ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಠಾಣೆಗಳ ಎದುರು ಟ್ರಾಫಿಕ್ ಜಾಮ್ ಆಗಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಕಿಡಿಕಾರಿದರು.

ಅನಂತಪುರ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಮಂಜೂರಾದ ₹200 ಕೋಟಿ ಅನುದಾನ ಇಂದಿಗೂ ಬಳಕೆಯಾಗಿಲ್ಲ. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ವಿರೋಧಿಗಳು ಈ ಕಾಮಗಾರಿಯನ್ನು ದುರುದ್ದೇಶಪೂರ್ವಕವಾಗಿ ತಡೆದರು. ಇದರಿಂದ ರೈತರಿಗೆ ಮೋಸವಾಗಿದೆ. ಕಾಗವಾಡ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಯಾವುದೇ ಒಂದೂ ಅಭಿವೃದ್ಧಿ ಕಾಮಗಾರಿಯೂ ಅನುಷ್ಢಾನಗೊಂಡಿಲ್ಲ. ಇದರಿಂದ ಕಾಗವಾಡ ಮತಕ್ಷೇತ್ರಕ್ಕೆ ಮತ್ತೆ ಹಿನ್ನಡೆಯಾಗಿದೆ ಎಂದು ದೂರಿದರು.ಬಿಜೆಪಿ ಧುರೀಣ ದಾದಾ ಶಿಂಧೆ ಮಾತನಾಡಿ, ಮೇ.7 ರವರೆಗೆ ನಮ್ಮ ಎಲ್ಲ ವೈಯಕ್ತಿಕ ಕೆಲಸ, ಕಾರ್ಯಗಳನ್ನು ಬದಿಗಿಟ್ಟು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಗೆಲ್ಲಿಸಲು ಪ್ರಯತ್ನಿಸೋಣ ಎಂದು ಮನವಿ ಮಾಡಿದರು.ಬಿಜೆಪಿ ಮುಖಂಡರಾದ ಅಭಯಕುಮಾರ ಅಕಿವಾಟೆ, ಉಜ್ವಲಾ ಬಡಾವಣಾಚೆ, ಪ್ರಭಾಕರ ಚವ್ಹಾಣ, ನಿಂಗಪ್ಪ ಖೋಕಲೆ ಮಾತನಾಡಿದರು. ವೇದಿಕೆಯಲ್ಲಿ ನಾನಾ ಡಾಂಗೆ, ಸುಭಾಶ ಮಾಳಿ, ಮಲ್ಲೇಶ ಮೇತ್ರಿ, ಅಪ್ಪಣ್ಣ ಮುಜಗೋಣಿ, ಅಶೋಕ ಇರಳಿ, ಮಲ್ಲು ಡೊಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಭಾರತದ ಭವಿಷ್ಯ ರೂಪಿಸುವ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಗೆ ತಮ್ಮ ಅಮೂಲ್ಯ ಮತ ನೀಡಿ ಆಯ್ಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಬೇಕು. ಹಿಂದಿನ 10 ವರ್ಷಗಳಿಗಿಂತಲೂ ಇನ್ನಷ್ಟು ಅಭಿವೃದ್ಧಿ ಮತ್ತು ಜನಪರ ಕಾರ್ಯಗಳ ಅನುಷ್ಠಾನಕ್ಕಾಗಿ ಮೋದಿಯವರನ್ನು ಬೆಂಬಲಿಸೋಣ.

-ಶ್ರೀಮಂತ ಪಾಟೀಲ, ಮಾಜಿ ಸಚಿವ.