ಸಾರಾಂಶ
ಹನೂರು : ಪವಾಡ ಪುರುಷನ ನೆಲವೆಂದೇ ಜನಜನಿತವಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪವಾಡ ರೀತಿಯಲ್ಲಿ ಬೆಂಗಳೂರಿನಲ್ಲಿ ನಾಪತ್ತೆಯಾದ ಮಕ್ಕಳು ಮಲೆ ಮಾದೇಶ್ವರ ಬೆಟ್ಟದಲ್ಲಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ.
ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಮೂರನೇ ಹಂತದ ನಿವಾಸಿಗಳಾದ ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿ ಪುತ್ರ ಪ್ರವೀಣ್ ಹಾಗೂ ಪ್ರವೀಣ್ ಸ್ನೇಹಿತ ರವಿ ಕಳೆದ ಶನಿವಾರ ನಾಪತ್ತೆಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಕ್ಕಳು ಕಾಣೆಯಾದ ಹಿನ್ನೆಲೆ ಪಾಲಕರು ಮನೆದೇವರಾದ ಮಾದಪ್ಪನ ಹರಕೆ ಹೊತ್ತು ಉರುಳು ಸೇವೆ ಮಾಡುತ್ತಿದ್ದ ವೇಳೆಯೇ ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳ ಬಗ್ಗೆ ಎಷ್ಟೇ ಹುಡುಕಾಡಿದರೂ ಸಿಗದೇ ಕೊನೆಗೆ ದೇವರ ಮೊರೆ ಹೋಗಿದ್ದ ಬಾಲಕ ಪ್ರವೀಣ್ ಪಾಲಕರು ತಮ್ಮ ಮನೆದೇವರು ಮಹದೇಶ್ವರನಿಗೆ ಹರಕೆ ಹೊತ್ತು ಮಕ್ಕಳ ಪತ್ತೆಗೆ ಉರುಳು ಸೇವೆ ಮಾಡುತ್ತಿದ್ದಂತೆ ದೇವಾಲಯ ರಾಜಗೋಪುರ ಬಳಿಯೇ ಮಕ್ಕಳನ್ನು ಕಂಡು ಪಾಲಕರು ಆನಂದಭಾಷ್ಪ ಸುರಿಸಿದ್ದಾರೆ.
ನಾಪತ್ತೆಯಾದ ಮಕ್ಕಳು ದೇವರ ಸನ್ನಿದಿಯಲ್ಲಿ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ. ಜೊತೆಗೆ ಮಾದಪ್ಪನ ಪವಾಡಕ್ಕೂ ಭಕ್ತ ಗಣ ಉಘೇ ಎಂದಿದೆ.
ಮಕ್ಕಳು ಪತ್ತೆಯಾದ ವಿಡಿಯೋ ವೈರಲ್: ಬೆಂಗಳೂರಿನಲ್ಲಿ ನಾಪತ್ತೆಯಾದ ಮಕ್ಕಳು ಮಲೆ ಮಾದೇಶ್ವರ ಬೆಟ್ಟದಲ್ಲಿ ಗುರುವಾರ ಪೋಷಕರು ಹರಕೆ ಹೊತ್ತು ಮಾದಪ್ಪನಿಗೆ ದೇವಾಲಯದ ಮುಂಭಾಗ ಉರುಳು ಸೇವೆ ಮಾಡುವ ಸಂದರ್ಭದಲ್ಲಿಯೇ ಮಕ್ಕಳು ತನ್ನ ಎದುರಿನಲ್ಲೇ ಕಾಣಿಸಿಕೊಂಡಿರುವುದರ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪೋಷಕರು ಮಾತನಾಡಿರುವ ಬಗ್ಗೆ ವೈರಲ್ ಆಗಿದೆ.