ನಾಪತ್ತೆಯಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತ ಶವವಾಗಿ ಪತ್ತೆ, ಕೊಲೆ ಶಂಕೆ

| Published : Aug 02 2025, 12:00 AM IST

ನಾಪತ್ತೆಯಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತ ಶವವಾಗಿ ಪತ್ತೆ, ಕೊಲೆ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಮನೋಜ ಪ್ರಕಾಶ ಉಡಗಣಿ(28) ಮೃತದೇಹ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಬಳಿ ವರದಾ ನದಿಯಲ್ಲಿ ಪತ್ತೆಯಾಗಿದೆ.

ಹಾವೇರಿ: ವಾರದ ಹಿಂದೆ ನಾಪತ್ತೆಯಾಗಿದ್ದ ಕಾಂಗ್ರೆಸ್‌ ಯುವ ಕಾರ್ಯಕರ್ತರೊಬ್ಬರ ಮೃತದೇಹ ಶುಕ್ರವಾರ ವರದಾ ನದಿಯಲ್ಲಿ ಪತ್ತೆಯಾಗಿದ್ದು, ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಮನೋಜ ಪ್ರಕಾಶ ಉಡಗಣಿ(28) ಮೃತದೇಹ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಬಳಿ ವರದಾ ನದಿಯಲ್ಲಿ ಪತ್ತೆಯಾಗಿದೆ.

ಇವರು ಕಾಂಗ್ರೆಸ್‌ ಯುವ ಕಾರ್ಯಕರ್ತನಾಗಿದ್ದು, ಜು. 25ರಂದು ಮನೆಯಿಂದ ತಮ್ಮ ಡಾಬಾಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಕೇಸ್‌ ದಾಖಲಿಸಿದ್ದರು. ಇವರ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಕುಟುಂಬದವರು ಇದು ಕೊಲೆ ಎಂದು ಆರೋಪಿಸಿದ್ದಾರೆ.

5 ವರ್ಷಗಳ ಹಿಂದೆ ಹಾವೇರಿಯ ಶಿವರಾಜ ಜಾಲವಾಡಗಿ ಎಂಬಾತನೊಂದಿಗೆ ಬಮ್ಮನಹಳ್ಳಿಯ ಅಶ್ವಿನಿ ಎಂಬವರ ವಿವಾಹವಾಗಿತ್ತು. ಆದರೆ, ಆಕೆಯೊಂದಿಗೆ ಮನೋಜ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿ ಅಶ್ವಿನಿಯ ಪತಿ ಶಿವರಾಜ ತಿಂಗಳ ಹಿಂದೆ ಬಂದು ಧಮಕಿ ಹಾಕಿದ್ದ. ಅಶ್ವಿನಿ ಸುದ್ದಿಗೆ ಬಂದರೆ ನಿನ್ನನ್ನು ಕೊಲೆ ಮಾಡುವುದಾಗಿ ಹೇಳಿದ್ದ. ಆದ್ದರಿಂದ ಶಿವರಾಜ ಹಾಗೂ ಆತನ ಸಹಚರರು ಸೇರಿಕೊಂಡು ವರದಾ ನದಿಗೆ ನೂಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಮನೋಜನ ತಂದೆ ಪ್ರಕಾಶ ದೂರು ನೀಡಿದ್ದಾರೆ.

ಈ ಕುರಿತು ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ

ಹಾನಗಲ್ಲ: ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಅನುದಾನದಡಿ ₹50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ಸಲ್ಲಿಸಿದರು.

ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಜತೆಗೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೂ ರಾಜ್ಯ ಸರ್ಕಾರ ಅನುದಾನ ದೊರಕಿಸುತ್ತಿದೆ.ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಅನುದಾನ ಬಿಡುಗಡೆಗೊಳಿಸಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಲಭಿಸಲಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವೆಸಗುತ್ತಿದೆ. ಈ ಬಗ್ಗೆ ಪ್ರಶ್ನಿಸದೇ ಬಿಜೆಪಿ ಸಂಸದರು ಮೌನ ವಹಿಸಿದ್ದಾರೆ. ಕರ್ನಾಟಕದಿಂದ ಜಿಎಸ್‌ಟಿ ರೂಪದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದ್ದರೂ ವಾಪಸ್ ನೀಡಲು ತಾರತಮ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾಘವೇಂದ್ರ ಕರೆಪ್ಪನವರ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಮುಖಂಡರಾದ ಈರಣ್ಣ ಬೈಲವಾಳ, ಮಂಜಪ್ಪ ಹೊಂಬಳಿ, ಗಂಗಪ್ಪ ಆನೆಗುಡ್ಡಿ, ಶಿವಾನಂದ ಚೂರಿ, ಶಂಕ್ರಪ್ಪ ಕರೆಪ್ಪನವರ, ಸುರೇಶ ಮಟ್ಟಿಮನಿ, ಶೇಖರಗೌಡ ಪಾಟೀಲ, ಸುರೇಶ ಕರೆಪ್ಪನವರ, ಲಕ್ಷ್ಮಣ ಆನೆಗುಡ್ಡಿ ಉಪಸ್ಥಿತರಿದ್ದರು.