ಗಾಂಧಿಯವರ ಸರ್ವೋದಯ ಸರ್ಕಾರದ ಧ್ಯೇಯ: ಸಿದ್ದರಾಮಯ್ಯ

| Published : Oct 03 2024, 01:29 AM IST

ಗಾಂಧಿಯವರ ಸರ್ವೋದಯ ಸರ್ಕಾರದ ಧ್ಯೇಯ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಹಾತ್ಮ ಗಾಂಧಿ ಅವರ 155 ನೇ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಮಹಾತ್ಮಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ. ಮಹನೀಯರ ಆದರ್ಶಗಳಿಂದ ರೂಪಿಸಿರುವ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಬಡವರಿಗೆ ಆರ್ಥಿಕ‌ ಸ್ವಾತಂತ್ರ್ಯ ಒದಗಿಸುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಅವರ 155 ನೇ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಮಹಾತ್ಮಗಾಂಧಿ ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡರು. ಬಳಿಕ‌ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟ ಸಂಘಟಿಸಿ ಸ್ವತಃ ಜೈಲು ಸೇರಿ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅವರ ಹೋರಾಟದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ನಾವು ಅನುಭವಿಸುತ್ತಿದ್ದೇವೆ ಎಂದರು.

ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ: ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ. ಗ್ರಾಮಗಳ ಉದ್ಧಾರ ಆಗದೆ ದೇಶ ಉದ್ಧಾರ ಆಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ. ಸ್ವಾತಂತ್ರ್ಯ ಭಾರತದಲ್ಲಿ ಡಾ। ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ‌ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ ಎಂದು ಹೇಳಿದರು.ವರ್ಷವಿಡೀ ಕಾರ್ಯಕ್ರಮ: ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಇದು ಮಹಾತ್ಮ ಗಾಂಧಿಜೀ ಅವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ನೂರು ವರ್ಷ ಪೂರ್ಣಗೊಂಡಿರುವ ವಿಶೇಷ ಘಳಿಗೆ. ನೂರು ವರ್ಷಗಳ ಹಿಂದೆ ಅಂದರೆ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿಕೊಂಡರು. ಆಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿದ್ದರು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ವರ್ಷವಿಡಿ ‘ಗಾಂಧಿ ಭಾರತ’ ಅಡಿ ವಿವಿಧ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಿದೆ. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಾವು ಪ್ರತಿ ಹಂತದಲ್ಲೂ ಗಾಂಧಿ ತತ್ವ ಅನುಸರಿಸುತ್ತಿದ್ದೇವೆ. ನಂಜನಗೂಡು ಬಳಿಯ ಬದನವಾಳುವಿನಲ್ಲಿ, ಸವರ್ಣೀಯರು ಮತ್ತು ಪರಿಶಿಷ್ಟ ಜಾತಿಗಳ ನಡುವೆ 30 ವರ್ಷಗಳ ಹಿಂದೆ ಸಂಘರ್ಷ ಉಂಟಾಗಿತ್ತು. ಇದನ್ನು ಬಗೆಹರಿಸಲು ಎರಡು ವರ್ಷದ ಹಿಂದೆ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಗಾಂಧಿ ಜಯಂತಿ ದಿನ, ರಾಹುಲ್ ಗಾಂಧಿ ಅವರ ಜೊತೆಗೂಡಿ ಆ ಊರಿನಲ್ಲಿ ಭಾರತ್ ಜೋಡೊ ರಸ್ತೆ ನಿರ್ಮಾಣ ಮಾಡಿ, ಇತಿಹಾಸ ಸೃಷ್ಟಿಸಲಾಯಿತು ಎಂದು ನೆನೆದರು.

ಕಾರ್ಯಕ್ರಮದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು ಮತ್ತು ಪೌರಕಾರ್ಮಿಕರಿಗೆ ಗೌರವ ನೀಡಬೇಕು ಎಂದು ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ಸಚಿವರಾದ ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಹಾಜರಿದ್ದರು.ಮಕ್ಕಳೇ ಕಾರ್ಯಕ್ರಮ ಮಾಡಬೇಕು: ಡಿಕೆಶಿ

ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕು ಎಂದು ಬಿಬಿಎಂಪಿಯ ಕಾರ್ಯಕ್ರಮಗಳಲ್ಲಿ ಸರ್ಕಾರಿ ಶಾಲಾ ಮಕ್ಕಳೇ ನಿರೂಪಣೆ ಸೇರಿದಂತೆ ಎಲ್ಲಾ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಅದೇ ರೀತಿ ಈ ದಿನ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಮಕ್ಕಳು ರೂಪಿಸಿ ಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.ಪ್ರತಿ ವಿದ್ಯಾರ್ಥಿಯಿಂದ ಒಂದು ಗಿಡ ನೆಡಿ: ಡಿಕೆಶಿ

ಪ್ರತಿ ಶಾಲೆಗಳಲ್ಲೂ ಒಬ್ಬ ವಿದ್ಯಾರ್ಥಿಯಿಂದ ಒಂದು ಗಿಡ ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಲು ಕಾರ್ಯಕ್ರಮ ಮಾಡುತ್ತಿದ್ದೇವೆ. ಇದಕ್ಕಾಗಿ ಸದ್ಯದಲ್ಲೇ 1 ಲಕ್ಷ ಗಿಡಗಳನ್ನು ಪೂರೈಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಮೆಟ್ರೋದಿಂದ ತೆರವಾದ ಮರಗಳನ್ನು ಬೆಳೆಸಲು ಏನು ಕ್ರಮ ಕೈಗೊಂಡಿದ್ದೀರಿ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಕನಿಷ್ಠ 1 ಲಕ್ಷ ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದು, ನಿಮ್ಮ ಹೆಸರಿನಲ್ಲಿ ನೀವೇ ಬೆಳಸಬೇಕು. ಎಲ್ಲಿ ಜಾಗವಿದ್ದರೆ ಅಲ್ಲಿ ಬೆಳೆಸಿ ನಿಮ್ಮ ಹೆಸರೇ ಹಾಕಿಕೊಂಡು ನಿಮ್ಮ ಮಕ್ಕಳಂತೆ ಬೆಳೆಸಿ ಎಂದು ಕರೆ ನೀಡಿದರು.

ಇದೇ ವೇಳೆ ಪ್ಲಾಸ್ಟಿಕ್‌ ನಿಷೇಧ, ಕಸ ವಿಲೇವಾರಿ, ಕಸ ವಿಂಗಡಣೆ, ಪರಿಸರ ಜಾಗೃತಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಉತ್ತರಿಸಿದರು. ಪ್ಲಾಸ್ಟಿಕ್‌ ನಿಷೇಧ ಹಾಗೂ ಕಸ ವಿಂಗಡಣೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ಕರೆ ನೀಡಿದರು.