ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸ್ವಸ್ಥ ಸಮಾಜದಲ್ಲಿ ಪರಸ್ಪರ ದ್ವೇಷ ಅಸೂಯೆ ಇರಬಾರದು ಎಂಬ ಸದ್ದುದ್ದೇಶದಿಂದ ಬೃಹತ್ ಲೋಕ ಅದಾಲತ್ ಮುಖಾಂತರ ರಾಜಿ ಮಾಡಿಸುವ ಮೂಲಕ ಅರೋಗ್ಯವಂತ ಸಮಾಜ ನಿರ್ಮಾಣಕ್ಕೆ ನ್ಯಾಯಾಲಯಗಳು ಪ್ರಯತ್ನ ಮಾಡುತ್ತಿವೆ ಎಂದು ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ಹೇಳಿದರು.ಶನಿವಾರ ಹೊನ್ನಾಳಿ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಾಲಯಗಳಿಗೆ ಸುತ್ತಾಡುವ ಬದಲು ಸ್ಥಳಿಯ ನ್ಯಾಯಾಲಯದಲ್ಲೇ ತಮ್ಮ ಪ್ರಕರಣಗಳು ರಾಜೀ ಮಾಡಿಕೊಂಡರೆ ಕೋರ್ಟ್‌ನಿಂದ ಕೋರ್ಟಿಗೆ ಅಲೆದಾಡುವುದು ತಪ್ಪುತ್ತದೆ ಹಾಗೂ ಜೀವನದಲ್ಲಿ ಶಾಂತಿ ನೆಮ್ಮದಿ ಕಂಡುಕೊಳ್ಳಬಹುದು ಎಂದು ಹೇಳಿದರು.ಜಮೀನು ವಿಚಾರಗಳಿಗೆ ರಕ್ತ ಸಂಬಂಧಿಗಳು ದ್ವೇಷ ಭಾವನೆಯಿಂದ ಜೀವನ ಸಾಗಿಸುವ ಬದಲು, ಇದ್ದುದ್ದರಲ್ಲೇ ಹಂಚಿಕೊಂಡು ತಮ್ಮ ವೈರತ್ವ ಮರೆತು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡರೆ ಸುಂದರ ಬದುಕನ್ನು ಸಾಗಿಸಬಹುದು ಎಂದ ಅವರು ರಾಜೀಯಾದ ಪ್ರಕರಣಗಳಿಂದ ಎಷ್ಟೋ ಕುಟುಂಬಗಳು ಇಂದಿಗೂ ಸಂತಸದ ಬದುಕನ್ನು ಸಾಗಿಸುತ್ತಿವೆ ಎಂದರು.
ಎರಡು ನ್ಯಾಯಾಲಯಗಳ 572 ಪ್ರಕರಣಗಳ ಪೈಕಿ 463 ಪ್ರಕರಣಗಳನ್ನು ರಾಜೀ ಮಾಡಿಸಿದ್ದೇವೆ, ಚೆಕ್‍ಬೌನ್ಸ್ ಹಾಗೂ ಹಣಕಾಸಿವ ಪ್ರಕರಣಗಳಲ್ಲಿ ₹85.63 ಲಕ್ಷ ವಸೂಲು ಮಾಡಿ ಅಯಾಯ ಪ್ರಕರಣಗಳ ಕಕ್ಷಿದಾರರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದೇವೆ ಎಂದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್ ಪುಣ್ಯಕೋಟಿ ಮಾತನಾಡಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ತಮ್ಮ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸಿಕೊಡಲಾಗುವುದು ಹಾಗೂ ಉಭಯ ಕಕ್ಷಿದಾರರಿಗೆ ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.
ಈ ವೇಳೆ ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ಜಯಪ್ಪ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ವಕೀಲ ಚಂದ್ರಪ್ಪ ಮಡಿವಾಳ, ಹಿರಿಯ ವಕೀಲರಾದ ಉಮಾಕಾಂತ್ ಜೋಯ್ಸ್, ಎಸ್.ಎನ್. ಪ್ರಕಾಶ್, ಸುನಿಲ್‍ಕುಮಾರ್ ಸೇರಿ ಇತರರು ಇದ್ದರು.-----
ಫೋಟೋ: 13ಎಚ್.ಎಲ್.ಐ2.ಹೊನ್ನಾಳಿ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಲೋಕ ಅದಾಲತ್ ನಡೆಯಿತು.