ಒಬಿಸಿಗೆ ವೀರಶೈವ, ಲಿಂಗಾಯತ ಸೇರಿಸುವುದೇ ಧ್ಯೇಯ: ಶಂಕರ ಮಹದೇವ ಬಿದರಿ

| Published : Sep 02 2024, 02:02 AM IST

ಸಾರಾಂಶ

ರಾಷ್ಟ್ರಮಟ್ಟದಲ್ಲೂ ಹೋರಾಟ ನಡೆಸುವ ಮೂಲಕ ಸಮಾಜದ ಬಂಧುಗಳಿಗೆ ನ್ಯಾಯ ದೊರಕಿಸುವುದೇ ನನ್ನ ಗುರಿಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ಹೇಳಿದರು. ಕೊಳ್ಳೇಗಾಲದಲ್ಲಿ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಲಿಂಗಾಯಿತ- ವೀರಶೈವ ಎರಡು ಒಂದೇ, ಎಲ್ಲರೂ ಒಗ್ಗಟ್ಟಾಗಿ ಹಕ್ಕು ಪಡೆಯೋಣ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವೀರಶೈವ ಅಥವಾ ಲಿಂಗಾಯತ ಎರಡು ಒಂದೇ ಆಗಿದ್ದು, ಎಲ್ಲರು ಒಗ್ಗಟ್ಟಾದಾಗ ಮಾತ್ರ ನಮ್ಮ ಬೇಡಿಕೆ ಹಾಗೂ ಆಶಯಗಳನ್ನು ಹಿಡೇರಿಸಿಕೊಳ್ಳಲು ಸಾಧ್ಯ, ಲಿಂಗಾಯಿತ ಸಮುದಾಯದವರನ್ನು ಒಬಿಸಿಗೆ ಸೇರಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ಈ ಹಿನ್ನೆಲೆ ರಾಷ್ಟ್ರಮಟ್ಟದಲ್ಲೂ ಹೋರಾಟ ನಡೆಸುವ ಮೂಲಕ ಸಮಾಜದ ಬಂಧುಗಳಿಗೆ ನ್ಯಾಯ ದೊರಕಿಸುವುದೇ ನನ್ನ ಗುರಿಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ಹೇಳಿದರು.

ಜೆಎಸ್ಎಸ್ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಬಸವ ಸೇವಾ ಪತ್ತಿನ ಸಹಕಾರ ಸಂಘ, ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಅಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಈಗಾಗಲೇ ಕೆಲ ಪಂಗಡಗಳನ್ನು ಒಬಿಸಿಗೆ ಸೇರಿದ್ದು, ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿ ನಮ್ಮ ಸಮಾಜದ ಬಂಧುಗಳನ್ನು ಒಬಿಸಿ ಸೇರಿಸುವಂತೆ ರಾಷ್ಟ್ರಮಟ್ಟದಲ್ಲೂ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗೋಣ ಎಂದರು.

ಕೇಂದ್ರ ಸರ್ಕಾರ ಲಿಂಗಾಯತ ಹಾಗೂ ವೀರಶೈವರಿಗೆ ಶೇ.5ರಷ್ಟು ಮೀಸಲಾತಿ ನೀಡಿದೆ. ಬೇಡ ಲಿಂಗಾಯತ ಸಮುದಾಯದವರೂ ಎಸ್‌ಟಿಗೆ ಬರುತ್ತಾರೆ. ಬೇಡ ಜಂಗಮರು ಎಸ್‌ಸಿಗೆ ಬರುತ್ತಿದ್ದು, ಈ ಸೌಲಭ್ಯಗಳನ್ನು ಬಳಸಿಕೊಳ್ಳಿ, ಈ ಸೌಲಭ್ಯಗಳನ್ನು ಪಡೆದುಕೊಳ್ಳಿ, ಮುಂದಿನ ದಿನಗಳಲ್ಲಿ ಒಬಿಸಿಗೆ ಸೇರ್ಪಡೆಗೆ ಹೋರಾಟ ಮುಂದುವರಿಸುತ್ತೇವೆ. ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಎಲ್ಲಾ ಆಶಯಗಳು ಈಡೇರಲು ಸಾಧ್ಯ. ಪ್ರತಿ ಜಿಲ್ಲೆಯಲ್ಲೂ 10 ಸಾವಿರಕ್ಕಿಂತ ಹೆಚ್ಚಿನ ಸದಸ್ಯರನ್ನು ಮಾಡುವ ಗುರಿ ನನ್ನದು, ಇದಕ್ಕೆ ಸಮಾಜದ ಬಂಧುಗಳೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕುದೇರು ಮಠಾಧ್ಯಕ್ಷ ಗುರುಶಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವರಾದ ನಾವು ಅನ್ಯರಿಗೆ ಕೆಟ್ಟದ್ದು ಮಾಡುತ್ತೇವೆ, ಕೆಟ್ಟದ್ದು ಬಯಸುತ್ತಿವೆ ಎಂಬ ನಿಲುವನ್ನು ಬಿಡಬೇಕು. ಸೌಹಾರ್ದತೆಯುತವಾಗಿ ಸಹಬಾಳ್ವೆ ನಡೆಸುವ ದಿಕ್ಕಿನಲ್ಲಿ ನಾವೆಲ್ಲರೂ ಸಾಗೋಣ ಎಂದರಲ್ಲದೆ, ಈ ಸಂಘಟನೆ ಇನ್ನಷ್ಟು ಪ್ರಬಲವಾಗಿ ಬೆಳವಣಿಗೆಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೖಷಬೇಂದ್ರ, ಶಿವಪುರ ಲೋಕೇಶ್ ಸೇರಿದಂತೆ ಹಲವು ಸಾಧಕರನ್ನು ಗೌರವಿಸಲಾಯಿತು.

ಸುತ್ತೂರು ಕ್ಷೇತ್ರ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ವಿ.ಎಲ್.ತ್ರಿಪುರಾಂತಕ, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ ಅಧ್ಯಕ್ಷ ಎಸ್‌.ಮಲ್ಲೇಶಪ್ಪ, ಬಸವ ಸೇವಾ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನಂಜುಂಡಸ್ವಾಮಿ (ನಂದೀಶ್), ಉಪಾಧ್ಯಕ್ಷ ಎಸ್‌.ಸೋಮಶೇಖರಪ್ಪ, ಬಸವ ಮಹಾಮನೆ ಟ್ರಸ್ಟ್ ಕಾರ್ಯದರ್ಶಿ ಜಿ.ವೀರಭದ್ರಸ್ವಾಮಿ ಇತರರು ಇದ್ದರು.