ಸಾರಾಂಶ
ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಕುಂದಗೋಳ: ಮಿಷನ್ ವಿದ್ಯಾಕಾಶಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಪಟ್ಟಣದ ಸನ್ ಶೈನ್ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಷನ್ ವಿದ್ಯಾಕಾಶಿ ಯೋಜನೆಯಡಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ಮಂಗಳವಾರ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ, ಎಸ್‌ಡಿಎಂಸಿ ಅಧ್ಯಕ್ಷರ, ಪಾಲಕರ ಸಭೆ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.ಶಿಕ್ಷಣ ಇಲಾಖೆ ಅಧಿಕಾರಿಗಳ, ಪಾಲಕರ, ಶಿಕ್ಷಕರ ಪ್ರಯತ್ನದಿಂದಾಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಓದುತ್ತಿದ್ದಾರೆ. ಇದು ನಮಗೆಲ್ಲ ಹೆಮ್ಮೆ ಮೂಡಿಸಿದೆ. ಜಿಲ್ಲೆಯ ಎಲ್ಲ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯಕ್ಕೆ ರ‍್ಯಾಂಕ್ ಬರಬೇಕು. ಈ ನಿಟ್ಟಿನಲ್ಲಿ ಮಿಶನ್ ವಿದ್ಯಾಕಾಶಿ ಕಳೆದ 10 ತಿಂಗಳಿಂದ ನಿರಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಭರವಸೆ ಕಂಡಿದೆ ಎಂದರು.ಸಭೆಯಲ್ಲಿ ಶಾಲಾ ಫಲಿತಾಂಶ ಸುಧಾರಣೆ ಮತ್ತು ಮಕ್ಕಳ ದಾಖಲಾತಿ ಪ್ರಗತಿ ಕುರಿತು ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಭೀಮಣ್ಣ ಸಾವಳಗಿ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಎಸ್.ಎಂ. ಬಡಿಗೇರ ವಂದಿಸಿದರು.