ಕಾಂಗ್ರೆಸ್‌ ಅವಧಿಯಲ್ಲಿ ಸಂವಿಧಾನ ದುರ್ಬಳಕೆ: ಗೋವಿಂದ ಕಾರಜೋಳ‌

| Published : Jan 28 2025, 12:46 AM IST

ಕಾಂಗ್ರೆಸ್‌ ಅವಧಿಯಲ್ಲಿ ಸಂವಿಧಾನ ದುರ್ಬಳಕೆ: ಗೋವಿಂದ ಕಾರಜೋಳ‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನದ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ದೇಶಕ್ಕೆ ಸಂವಿಧಾನ ಅರ್ಪಣೆ ಮಾಡಿ 75 ವರ್ಷವಾಯಿತು. ಈ ಅವಧಿಯಲ್ಲಿ ಅತಿ ಹೆಚ್ಚು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ‌ ಆರೋಪಿಸಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆಯಿಂದ ಸೋಮವಾರ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಹಾಗೂ ‘ಸಂವಿಧಾನ ಬದಲಾಯಿಸಿದ್ದು ಯಾರು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನದ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದರು. ಸಂವಿಧಾನವನ್ನು ಯಾರು ಎಷ್ಟು ಬಾರಿ ತಿದ್ದುಪಡಿ ಮಾಡಿದರು, ಏತಕ್ಕಾಗಿ ಮಾಡಿದರು ಎಂಬುದು ಮುಖ್ಯ ಎಂದರು.

ಇದೂವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ 50 ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 75 ಬಾರಿ, ವಾಜಪೇಯಿ ಪ್ರಧಾನಿಯಾಗಿದ್ದಾಗ 14 ಬಾರಿ, ನರೇಂದ್ರ ಮೋದಿಯವರು ಪ್ರಧಾನಿಯಾಗಿ 8 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ ಎಂದರು.

ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎನ್ನುವ ಉದ್ದೇಶದಿಂದ ಚುನಾವಣೆ ತಕರಾರುಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖವಿದೆ. 1975ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಲಹಾಬಾದ್ ನ್ಯಾಯಾಲಯ ಅಸಿಂಧು ಎಂದು ಆದೇಶ ಮಾಡಿದ್ದ ಸಂದರ್ಭದಲ್ಲಿ ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ತಮಗೆ ಅನುಕೂಲ ಆಗುವಂತೆ ಕಾಂಗ್ರೆಸ್‌ನವರು ಸಂವಿಧಾನ ತಿದ್ದುಪಡಿ ಮಾಡಿಕೊಂಡರು ಎಂದರು.

ಎಸ್.ಸಿ, ಎಸ್.ಟಿ ನೌಕರರು, ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಲಾಗುವುದಿಲ್ಲ ಎಂಬ ಕೋರ್ಟ್ ಆದೇಶ ಬಂದಾಗ ಪ್ರಧಾನಿ ವಾಜಪೇಯಿ ಆಡಳಿತದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಸಮುದಾಯಗಳಿಗೆ ಅನುಕೂಲ ಮಾಡಲಾಯಿತು. 170 ವಿಧಿ ಅನುಷ್ಠಾನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪರಿಶಿಷ್ಟಜಾತಿ, ವರ್ಗಗಳಿಗೆ ಮೀಸಲಾತಿ, ಸೇರಿದಂತೆ ಯಾವುದೇ ಸಂವಿಧಾನಾತ್ಮಕ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತಂದು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 170 ವಿಧಿಯನ್ನು ರದ್ದು ಮಾಡಲಾಯಿತು ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನ ಅಪಾಯದಲ್ಲಿದೆ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ಸಂವಿಧಾನಕ್ಕೆ ಯಾವ ಅಪಾಯವೂ ಬಂದಿಲ್ಲ. ಸಂವಿಧಾನ ಸುಭದ್ರವಾಗಿದ್ದರೆ ಅದು ಬಿಜೆಪಿ ನಾಯಕತ್ವದಲ್ಲಿ ಮಾತ್ರ. ಕಾಂಗ್ರೆಸ್ ಪಕ್ಷ ಸ್ವಾರ್ಥಕ್ಕಾಗಿ ಇರುವ ಮಹಾಕೂಟ. ಈ ದೇಶ ವಿರೋಧಿ ಪಕ್ಷ. ಇದು ಗಾಂಧೀಜಿ ಕಾಲದ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್ ಎಂದು ಹೇಳಿದರು.

ಸಂವಿಧಾನಕ್ಕೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿಕೊಂಡು ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರ ಅನುಭವಿಸಿದ ಕಾಂಗ್ರೆಸ್‌ನವರ ಮುಖವಾಡ ಕಳಚಿದ ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್‌ನವರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ಹಿಂದೂ ರಾಷ್ಟ್ರ ಸಂವಿಧಾನ ಜಾರಿಗೆ ತರಲಾಗುತ್ತಿದೆ ಎಂಬ ವಿಚಾರಗಳು ಹರಿದಾಡುತ್ತಿವೆ. ಇದು ಅಪ್ಪಟ ಸುಳ್ಳು ಸುದ್ದಿ. ಅಂಬೇಡ್ಕರ್ ಅವರ ಸಂವಿಧಾನ ಬಿಟ್ಟು ಇನ್ನೊಂದು ಸಂವಿಧಾನ ಈ ದೇಶದಲ್ಲಿ ಬರಲು ಸಾಧ್ಯವಿಲ್ಲ, ನಾವ್ಯಾರೂ ಒಪ್ಪುವುದಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದರು.

ಲೇಖಕ ವಾದಿರಾಜ್ ಅವರು, ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್, ಬಾಬು ಜಗಜೀವನರಾಂ, ದೇವರಾಜ ಅರಸು ಅಂತಹವರನ್ನು ಬಳಸಿಕೊಂಡು ಬಿಸಾಡಿದ್ದಾರೆ. ನೆಹರು ಕುಟುಂಬದವರ ಹೊರತಾಗಿ ಇನ್ಯಾರೂ ದೇಶದಲ್ಲಿ ಆಡಳಿತ ನಡೆಸುವುದನ್ನು ಸಹಿಸುವುದಿಲ್ಲ. ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವವಿಲ್ಲ, ಸರ್ವಾಧಿಕಾರಿ ಆಡಳಿತವಿದೆ ಎಂದು ಅನೇಕ ನಾಯಕರು ಕಾಂಗ್ರೆಸ್ ಬಿಟ್ಟು ಬಂದಿದ್ದಾರೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಕಾಂಗ್ರೆಸ್‌ನಿಂದ ದಲಿತರ ಏಳಿಗೆ ಸಾಧ್ಯವಿಲ್ಲ, ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್, ಮಹದೇವಪ್ಪನಂತಹವರು ಮಾತ್ರ ಉದ್ಧಾರ ಆಗ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರು ಪಕ್ಷದ ಕೇವಲ ಪದಾಧಿಕಾರಿಯಷ್ಟೇ, ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ. ಕೇವಲ ದುಡಿಸಿಕೊಳ್ಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಆತ್ಮವಂಚನೆ ಮಾಡಿಕೊಳ್ಳದೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅವಮಾನದ ಬಗ್ಗೆ ಸತ್ಯ ಹೇಳಲಿ ಎಂದರು.

ಈ ವೇಳೆ ವಿಕಾಸ್ ಪುತ್ತೂರು ರಚಿಸಿರುವ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಮಾಡಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ.ಆಂಜನಪ್ಪ, ನಗರ ಅಧ್ಯಕ್ಷ ಹನುಮಂತರಾಯಪ್ಪ, ರಾಜ್ಯ ಉಪಾಧ್ಯಕ್ಷ ಓಂಕಾರ್, ರಾಜ್ಯ ಕಾರ್ಯಕಾರಿ ಮಂಡಳಿ ನಿಕಟಪೂರ್ವ ಸದಸ್ಯ ಪ್ರಭಾಕರ್, ಮುಖಂಡರಾದ ವಿಜಯಕುಮಾರ್, ನರಸಿಂಹಮೂರ್ತಿ, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ನಗರದ ಬಿಜಿಎಸ್ ವೃತ್ತದಿಂದ ಮಂಗಳ ವಾದ್ಯಗಳೊಂದಿಗೆ ಅಲಂಕೃತ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಗ್ರಂಥದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.