ದಲಿತರ ಹಣ ದುರುಪಯೋಗ: ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ

| Published : Mar 02 2025, 01:15 AM IST

ದಲಿತರ ಹಣ ದುರುಪಯೋಗ: ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರಿಗೆ ಮೀಸಲಾದ ಎಷ್ಟು ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಶ್ವೇತಪತ್ರ ಹೊರಡಿಸಿ

ಕಾರವಾರ; ದಲಿತಪರ ಎಂದು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಉಂಟುಮಾಡಿದ್ದಾರೆ. ದಲಿತರಿಗೆ ಮೀಸಲಾದ ಎಷ್ಟು ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಆಗ್ರಹಿಸಿದರು.ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತರಿಗೆ ದ್ರೋಹ ಮಾಡಿದೆ. ದಲಿತರ ಪರವಾಗಿ ಧ್ವನಿ ಎತ್ತಲು ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ 14 ತಂಡಗಳನ್ನು ಮಾಡಿಕೊಂಡು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ. ದಲಿತರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.

ಗ್ಯಾರಂಟಿ ಹೆಸರಿನಲ್ಲಿ ₹14,480 ಕೋಟಿ ಎಸ್ಸಿಪಿ, ಟಿಎಸ್ಪಿ ಹಣವನ್ನು ಬಳಕೆ ಮಾಡಿಕೊಂಡು, ₹60 ಸಾವಿರ ಕೋಟಿ ಗ್ಯಾರಂಟಿಗಾಗಿ ಹಣ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಅಲ್ಪಸಂಖ್ಯಾಂತರಿಗಾಗಿ ಮೀಸಲಿಟ್ಟ ₹3 ಸಾವಿರ ಕೋಟಿ ಹಣದಲ್ಲಿ ಒಂದು ರುಪಾಯಿ ಕೂಡ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಎಸ್ಸಿಪಿ, ಟಿಎಸ್ಪಿ ಹಣವನ್ನು ಶಕ್ತಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದಾಗಿ ತೋರಿಸಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಟಿಕೆಟ್ ಪಡೆಯುವವರ ಜಾತಿ ಕೇಳಿ ಟಿಕೆಟ್ ಕೊಡುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.

ದಲಿತರಿಗೆ ಇಟ್ಟ ಹಣವನ್ನು ಎಷ್ಟು ಬಳಕೆ ಮಾಡಿದ್ದೀರೆಂದು ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಗ್ರಹಿಸಿದರು.

ಮುಂದಿನ ಬಜೆಟ್‌ನಲ್ಲಿ ಮಂಜೂರಾಗುವ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಬಾರದು, ಹಾಗೇನಾದರೂ ಮಾಡಿದಲ್ಲಿ ಬಿಜೆಪಿಯಿಂದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದರ ಜೊತೆಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಅಹಿಂದ ಹೆಸರಿನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಲಿತರನ್ನು ಕಡೆಗಣಿಸಿ, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಕೊಡುವ ನಿಟ್ಟಿನಲ್ಲಿ ದುರ್ಬಳಕೆ ಮಾಡಿದ್ದಾರೆ. ದಲಿತ ಸಮುದಾಯದ ವಿದ್ಯಾರ್ಥಿಗಳು ಮುಂದೆ ಬರಬೇಕು. ಅವರ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ನುಂಗಿ, ರಾಜ್ಯಭಾರ ಮಾಡುತ್ತಿದೆ. ಮಕ್ಕಳಿಗೆ ಬರುತ್ತಿದ್ದ ಸ್ಕಾಲರಶಿಪ್ ಹಣವನ್ನು ಸಹ ಕಡಿಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿ ಅಧಿಕಾರ ನಡೆಸುತ್ತಿರುವುದನ್ನು ಖಂಡಿಸುತ್ತೇವೆ. ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ ದಲಿತರ ಹಣವನ್ನುಮರಳಿಸುವಂತೆ ಆಗ್ರಹಿಸುತ್ತೇವೆ ಎಂದರು.

ವಿಪ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ದಲಿತಪರ ಎಂದು ಹೇಳಿಕೊಂಡು ಸಿಎಂ ಸಿದ್ದರಾಮಯ್ಯ ದಲಿತರಿಗೇ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಜೆಟ್ ಘೋಷಣೆ ಮೊದಲು ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ವಾಪಸ್ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಿ, ದಲಿತರಿಗೆ ನ್ಯಾಯ ಒದಗಿಸುತ್ತೇವೆ ಎಂದರು.

ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಜಗದೀಶ ಮೊಗಟಾ, ಅಶೋಕ ಚಲವಾದಿ, ಎಲ್.ಟಿ.ಪಾಟೀಲ್, ಎಸ್ಸಿ ಮೋರ್ಚಾ ಅಧ್ಯಕ್ಷ ನಂದನ ಬೋರ್ಕರ್, ಒಬಿಸಿ ಮೋರ್ಚಾದ ರಾಜೇಂದ್ರ ನಾಯ್ಕ, ಮಂಜುನಾಥ, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸಂತೋಷ ತಳವಾರ, ವೀಣಾ ಸಿದ್ದಿ ಹಾಗೂ ಇತರರು ಇದ್ದರು.