ವಾಣಿಜ್ಯ ದುರುದ್ದೇಶಕ್ಕೆ ಕೊಡವ ಲ್ಯಾಂಡ್ ದುರ್ಬಳಕೆ: ನಾಚಪ್ಪ ಆರೋಪ

| Published : Jul 03 2024, 12:19 AM IST

ವಾಣಿಜ್ಯ ದುರುದ್ದೇಶಕ್ಕೆ ಕೊಡವ ಲ್ಯಾಂಡ್ ದುರ್ಬಳಕೆ: ನಾಚಪ್ಪ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರದ 2400 ಎಕರೆ ಕಾಫಿ ತೋಟಗಳು, ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಕಕ್ಕಬ್ಬೆ ಜಂಕ್ಷನ್‌ನಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಸಿದ್ದಾಪುರದ 2400 ಎಕರೆ ಕಾಫಿ ತೋಟಗಳು, ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಕಕ್ಕಬ್ಬೆ ಜಂಕ್ಷನ್‌ನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣ ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಂಧೆಕೋರರಿಗೆ ಮಾರ್ಗ ತೋರಿಸುತ್ತಿದೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪಂಚಾಯಿತಿ ಪಿಡಿಒಗಳು ಜನಪೀಡಕರಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಸಹಾಯ ಮಾಡುತ್ತಿದ್ದಾರೆ. ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯುವ ಬಂಡವಾಳಶಾಹಿಗಳು ರೆಸಾರ್ಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಸ್ಥಳೀಯರು ಕೇವಲ ಸ್ವಂತ ಮನೆ ಕಟ್ಟಲು ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗಿದೆ. ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ನಮ್ಮ ಅನುವಂಶಿಕ ಭೂಮಿ ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಅಪ್ಪಾರಂಡ ನಂದಿನಿ ನಂಜಪ್ಪ, ನಾಟೋಳಂಡ ಕಮಲಾ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಾಂಡಂಡ ನರೇಶ್, ಕೆಟೋಳಿರ ಸನ್ನಿ ಸೊಮಣ್ಣ, ಬಾಚಮಂಡ ರಾಜಾ ಪೂವಣ್ಣ, ಚೇನಂಡ ಸುರೇಶ್, ಅಪ್ಪಾರಂಡ ಶ್ರೀನಿವಾಸ್, ಉದಿಯಂಡ ಸುಭಾಷ್ ಮತ್ತಿತರರು ಪಾಲ್ಗೊಂಡರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಹಾಗೂ ಕೊಡವ ಲ್ಯಾಂಡ್‌ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಜು.6 ರಂದು ಚೆಟ್ಟಳ್ಳಿ ಮತ್ತು ಜು.15 ರಂದು ಪೊನ್ನಂಪೇಟೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.