ಸಾರಾಂಶ
- ದಾವಣಗೆರೆಯಲ್ಲಿ ಬಣದ ಹೆಸರಲ್ಲಿ ಅಂಗನವಾಡಿ ನೌಕರರ ಒಗ್ಗಟ್ಟು ಒಡೆಯಲು ಕುಚೋದ್ಯ ಶಕ್ತಿಗಳ ಯತ್ನ: ಆರೋಪ - ರಾಜ್ಯ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ಸಭೆ ಉದ್ಘಾಟನಾ ಸಮಾರಂಭ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಎಚ್.ಕೆ.ರಾಮಚಂದ್ರಪ್ಪ ಅಂದರೆ ಭಾರತ ಕಮ್ಯುನಿಷ್ಟ್ ಪಕ್ಷ, ಎಐಟಿಯುಸಿ ಸಂಘಟನೆ ಎಂದೇ ಅರ್ಥ. ಇಂತಹ ಎಚ್‌ಕೆಆರ್ ಹೆಸರಿಗೆ ಕೆಲವು ಕುಚೋದ್ಯ ಶಕ್ತಿಗಳು ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿವೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರೆಗೆರೆ ಎಚ್.ಜಿ. ಉಮೇಶ ಕಿಡಿಕಾರಿದರು.ನಗರದ ಅಶೋಕ ರಸ್ತೆಯ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ಸಭೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದಾವಣಗೆರೆಯಲ್ಲಿ ಕೆಲವು ಕುಚೋದ್ಯ ಶಕ್ತಿಗಳು ಬಣ ರಾಜಕೀಯ ಮಾಡಲು ಮುಂದಾಗಿದ್ದು, ಅದಕ್ಕೆ ಎಚ್ಕೆಆರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿರುವುದು ಅಕ್ಷಮ್ಯ. ಬಣ ರಾಜಕಾರಣ ವಿರುದ್ಧ ಕಾರ್ಮಿಕರು ಸಂಘಟಿತರಾಗಿ, ಸವಾಲಾಗಿ ಸ್ವೀಕರಿಸಬೇಕು ಎಂದರು.
ಕೆಲಸ ಮಾಡುವ ವ್ಯಕ್ತಿಗಳನ್ನು ಸಂಘಟನೆಯ ರಾಜ್ಯ ಸಮಿತಿಯು ಪಕ್ಷ, ಸಂಘಟನೆಗಳಿಂದಲೇ ಉಚ್ಛಾಟನೆ ಮಾಡಿದೆ. ಕಾರ್ಮಿಕರ ಪರ ಹೋರಾಟ, ಪ್ರತಿಭಟನೆಗಳಿಗೆ ಬಾರದೇ, ಕೇವಲ ಹೆಸರಿಗಷ್ಟೇ ಬರುವ ನಾಯಕರು ನಮ್ಮ ಪಕ್ಷಕ್ಕಾಗಲೀ, ಸಂಘಟನೆಗಳಿಗಾಗಲೀ ಬೇಕಾಗಿಲ್ಲ ಎಂದರು.ಬ್ಯಾಂಕ್ ನೌಕರರ ಸಂಘಟನೆ ಮುಖಂಡ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಹೋರಾಡುವ ಸಂಘಟನೆಗಳು ಸೈದ್ಧಾಂತಿಕವಾಗಿ ಬೆಳೆಯಬೇಕೇ ಹೊರತು, ವ್ಯಕ್ತಿ ಆಧಾರಿತ ಸಂಘಟನೆಗಳಾಗಬಾರದು. ಎಲ್ಲ ಹಂತದಲ್ಲಿ ಸಂಘಟನೆಗಳು ಶಕ್ತಿಯಾಗಿ ಬೆಳೆಯಬೇಕಿದೆ. ಶೋಷಣೆರಹಿತ ಸಂಘಟನೆಯೆಂದರೆ ಅದು ಎಐಟಿಯುಸಿ ಮಾತ್ರ. ದಾವಣಗೆರೆ ರಾಷ್ಟ್ರಮಟ್ಟದಲ್ಲಿ ಹೆಸರಾದ ಊರು. ಎಐಟಿಯುಸಿ, ಸಿಪಿಐ ಪಕ್ಷಗಳು ತಮ್ಮನ್ನು ತಾವು ಯಾವತ್ತೂ ರಾಜಕೀಯ ನಾಯಕರಂತೆ ಭಾವಿಸಲಿಲ್ಲ ಎಂದು ಹೇಳಿದರು.
ಒಂದುವೇಳೆ ಎಚ್.ಕೆ.ಆರ್. ರಾಜಕೀಯ ನಾಯಕರಾಗಬೇಕೆಂಬ ಮನೋಭಾವ ಹೊಂದಿದ್ದರೆ ಶಾಸಕರೋ, ಸಂಸದರಾಗಿಯೋ ಅಧಿಕಾರ ಅನುಭವಿಸಬಹುದಿತ್ತು. ನಮ್ಮ ಕಾರ್ಮಿಕ ನಾಯಕರು ಯಾವುದೇ ಕೆಲ ವ್ಯಕ್ತಿಗಳ ಆಸ್ತಿಯಲ್ಲ. ಕಾರ್ಮಿಕರ ಶಕ್ತಿ. ಅಂತಹವರ ಆದರ್ಶ, ಹೋರಾಟದ ಹಾದಿಗಳೇ ನಮಗೆ ದಾರಿದೀಪ. ಯಾವುದೇ ವಿಘಟನೆಯ ಶಕ್ತಿಗಳು ಎದುರಾಳಿಯಾದರೆ, ನಾವು ಶುಭ್ರರಾಗುತ್ತೇವೆ. ಯಾವುದೇ ಶಕ್ತಿಗಳು ನಮ್ಮ ಹೋರಾಟದ ದಿಕ್ಕನ್ನು ಬದಲಿಸಲು ಸಾಧ್ಯವಿಲ್ಲ. ಆದಕಾರಣ ಯಾವುದೇ ಕಾರಣಕ್ಕೆ ಕಾರ್ಮಿಕರು ಎದೆಗುಂದದೆ ಮುತುವರ್ಜಿಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಸಂಘಟನೆಯ ಮುಖಂಡರಾದ ಆವರಗೆರೆ ಚಂದ್ರು, ರತ್ನಾ ಶಿರೂರು, ಎಂ.ಜಯಮ್ಮ, ಗಿರಿಜಾ, ಎಸ್.ಎಸ್.ಮಲ್ಲಮ್ಮ, ಮಹಮ್ಮದ್ ಭಾಷಾ ಇತರರು ಇದ್ದರು.
- - -ಬಾಕ್ಸ್ * ಎಐಟಿಯುಸಿ ದೇಶ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಏಕೈಕ ಸಂಘಟನೆ: ರಾಜ್ಯಾಧ್ಯಕ್ಷ ಸಭೆ ಉದ್ಘಾಟಿಸಿದ ಫೆಡರೇಷನ್ ರಾಜ್ಯಾಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ದೇಶದ ಸ್ವಾತಂತ್ರ್ಯ, ಸಮಗ್ರತೆ ಐಕ್ಯತೆಗಾಗಿ ಮುಡಿಪಿಟ್ಟ ಏಕೈಕೆ ಸಂಘಟನೆಯೆಂದರೆ ಅದು ಎಐಟಿಯುಸಿ ಮಾತ್ರ. ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ಸಾಮಂತ ಕಂಪನಿಗಳು, ಬಂಡವಾಳಶಾಹಿಗಳು, ಕಾರ್ಪೋರೇಟ್ ಕಂಪನಿಗಳ ಪರ ಕೆಲಸ ಮಾಡುತ್ತ, ಪ್ರಾಮಾಣಿಕವಾಗಿ ದುಡಿಯುವ ಕಾರ್ಮಿಕರ ಶ್ರಮವನ್ನು ಶೋಷಣೆಗೀಡು ಮಾಡುತ್ತಿವೆ. ಕಾರ್ಮಿಕರ ಪರ ರಕ್ಷಣಾತ್ಮಕ ನಿರ್ಣಯ ಕೈಗೊಳ್ಳದೇ, ಏಕಸ್ವಾಮ್ಯ ಉದ್ಯಮದ ಪರ ಕೆಲಸ ಮಾಡುತ್ತಿದೆ ಎಂದು ದೂರಿದರು. ಎಐಟಿಯುಸಿ ಸಂಘಟನೆ 105 ವರ್ಷಗಳ ಸುದೀರ್ಘ, ಚಾರಿತ್ರಿಕ ಹೋರಾಟದ ಇತಿಹಾಸ, ಹಿನ್ನೆಲೆ ಹೊಂದಿರುವ ಸಂಘಟನೆಯಾಗಿದೆ. ದುಡಿಯುವ ಜನರ ಪರ ಕೆಲಸ ಮಾಡುತ್ತಾ, ಹಲವಾರು ಸಂಘಟಿತ ಹೋರಾಟ ನಡೆಸಿಕೊಂಡೇ ಬಂದಿದೆ. ಆದರೆ, ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿಯಾಗಿ ಕೆಲಸ ಮಾಡುತ್ತಿವೆ. ಶ್ರಮಿಕ ವಿರೋಧಿ ನೀತಿಗಳನ್ನು ಸರ್ಕಾರಗಳು ರೂಪಿಸುತ್ತಿವೆ. ಅಲ್ಲದೇ, ಉಭಯ ಸರ್ಕಾರಗಳ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಮಹಿಳಾ ವಿರೋಧಿ ನೀತಿ, ನಿಲುವು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
- - - -29ಕೆಡಿವಿಜಿ1.ಜೆಪಿಜಿ:ದಾವಣಗೆರೆ ಸಿಪಿಐ ಕಚೇರಿ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಭಾನುವಾರ ರಾಜ್ಯ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ಸಭೆಯನ್ನು ಫೆಡರೇಷನ್ ರಾಜ್ಯಾಧ್ಯಕ್ಷ ಅಮ್ಜದ್ ಖಾನ್ ಉದ್ಘಾಟಿಸಿದರು.