ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡು ಇಂದು ಅಥವಾ ನಾಳೆ ಜೈಲಿಗೆ ಹೋಗುವವರು ಹಾಸನದಲ್ಲಿ ಜನ ಕಲ್ಯಾಣ ಸಮಾವೇಶವನ್ನು ನಡೆಸಿದ್ದಾರೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ವಾಗ್ದಾಳಿ ನಡೆಸಿದರು.ಪಟ್ಟಣದ ಯಾತ್ರಿಭವನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜೊತೆಗೆ ನಮ್ಮ ಎಸ್ಸಿ, ಎಸ್ಟಿ ಅನುದಾನದಲ್ಲಿ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ನಡೆಸಿದೆ ಎಂದ ಅವರು, ನೆಹರು ಅವರಿಗೆ ಇದ್ದಂತಹ ಸೋವಿಯತ್ ಒಕ್ಕೂಟ ಮತ್ತು ಕಮ್ಯುನಿಸ್ಟ್ ಪಕ್ಷಗಳ ಹುಚ್ಚುತನವನ್ನು ತಲೆಲಿಟ್ಟುಕೊಂಡು ಕಾಂಗ್ರೆಸ್ ಸಂವಿಧಾನಕ್ಕೆ 42ನೇ ತಿದ್ದುಪಡಿ ಮೂಲಕ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರ್ಪಡೆ ಮಾಡಿದೆ. ಆದರೆ ಸಮಾಜವಾದಿಯೇ ಬೇರೆ ಸಾಮಾಜಿಕ ನ್ಯಾಯವೇ ಬೇರೆಯಾಗಿದ್ದು, ಅವರ ತಿದ್ದುಪಡಿಗೆ ಮೌಲ್ಯವಿಲ್ಲ ಎಂದರು.ಬಾಬಾ ಸಾಹೇಬರ ವಿಮೋಚನಾ ರಥ ಅರ್ಧಕ್ಕೆ ನಿಂತಿದ್ದು ಆ ರಥವನ್ನು ಮುಂದಕ್ಕೆ ಎಳೆಯುವ ಸಲುವಾಗಿ ಎಲ್ಲರೂ ಕೂಡ ಜಾತಿ ಮತ ಎಂಬ ಭೇದ ಭಾವವನ್ನು ಬಿಟ್ಟು ಭಾರತೀಕರಣವಾಗಬೇಕು, ಇಂತಹ ಚಿಂತನೆಗಳನ್ನು ಜನರಲ್ಲಿ ಮೂಡಿಸುವ ಸಲುವಾಗಿ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸುವ ಮೂಲಕ ಅರಿವು ಮೂಡಿಸಿ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿಯಿಂದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದ ಸಂಚಾಲಕ ಎಸ್. ಮಹದೇವಯ್ಯ ಮಾತನಾಡಿ, ದೇಶದ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೂ ತಿಳಿಸಿ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷ ನ. 26 ರಿಂದ ಜ. 26ರವರೆಗೆ ರಾಜ್ಯಾದ್ಯಂತ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮಗಳನ್ನು ರೂಪಿಸಿದೆ. ವರಿಷ್ಠರ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಎರಡು ತಿಂಗಳ ಕಾಲ ಎಲ್ಲಾ ಶಕ್ತಿ, ಮಹಾ ಶಕ್ತಿ ಕೇಂದ್ರಗಳಲ್ಲೂ ಕಾರ್ಯಕ್ರಮ ರೂಪಿಸಲಾಗುವುದು ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಬಿಜೆಪಿ ರಾಜ್ಯ ಮುಖಂಡರಾದ ಫಣೀಶ್, ನಾಗರಾಜ ಮಲ್ಲಾಡಿ, ಪ್ರಫುಲ್ಲಾ ಮಲ್ಲಾಡಿ, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಎಸ್.ಎಂ. ಕೆಂಪಣ್ಣ, ಮುಖಂಡರಾದ ಹೆಮ್ಮರಗಾಲ ಸೋಮಣ್ಣ, ಬದನವಾಳು ರಾಮು, ವಳಗೆರೆ ಪುಟ್ಟಸ್ವಾಮಿ, ಶ್ರೀನಿವಾಸ ರೆಡ್ಡಿ, ಸಿದ್ದರಾಜು, ಬಾಲಚಂದ್ರು, ಮಹೇಶ್ ಬಾಬು, ಎನ್.ಸಿ. ಬಸವಣ್ಣ, ಶ್ಯಾಮ್ ಪಟೇಲ್, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಮಾಜಿ ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ಇದ್ದರು.
----------------