ಕನ್ನಡಪ್ರಭ ವಾರ್ತೆ ನಾಗಮಂಗಲ

ಪುರುಷ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡುವ ಬದಲಿಗೆ ಮಹಿಳಾ ಪ್ರಯಾಣಿಕರಿಗೆ ನೀಡುವ ಉಚಿತ ಟಿಕೆಟ್ ಕೊಟ್ಟು ಸಾರಿಗೆ ಬಸ್‌ಗಳ ಕೆಲ ನಿರ್ವಾಹಕರು ಶಕ್ತಿ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಈ ಬಗ್ಗೆ ಗಮನಹರಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕೇ ಹೊರತು ಯಾವುದೇ ಕಾರಣಕ್ಕೂ ದುರ್ಬಳಕೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಶೂನ್ಯದರ ನಮೂದಾಗಿರುವ ಉಚಿತ ಟಿಕೆಟ್ ನೀಡಲಾಗುತ್ತದೆ. ಆದರೆ, ಅದೇ ಬಸ್‌ಗಳಲ್ಲಿ ಹಣಕೊಟ್ಟು ಪ್ರಯಾಣಿಸುವ ಮುಗ್ದ ಅಥವಾ ಅನಕ್ಷರಸ್ಥ ಪುರುಷರಿಗೂ ಕೂಡ ಮಹಿಳೆಯರಿಗೆ ನೀಡುವ ಉಚಿತ ಟಿಕೆಟ್‌ ಕೊಟ್ಟು ಕೆಲ ಕಂಡಕ್ಟ್‌ರ್‌ಗಳು ವಂಚಿಸುತ್ತಿದ್ದಾರೆನ್ನಲಾಗುತ್ತಿದೆ ಎಂದು ಆರೋಪಿಸಿದರು.

ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಕಾಫಿ ಟೀ ಅಂಗಡಿ ಹಾಗೂ ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬಳಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಗೃಹಬಳಕೆ ಗ್ಯಾಸ್ ಸಿಲಿಂಡರ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ವ್ಯಾಪಕ ದೂರುಗಳು ಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಹಾರ ನಿರೀಕ್ಷಕರಿಗೆ ಸೂಚಿಸಿದರು.


ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಯಾವುದೇ ಸಮಸ್ಯೆಯಾಗದಂತೆ ಪಡಿತರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಎಂದು ಆಹಾರ ನಿರೀಕ್ಷಕ ಅನಿಲ್‌ಕುಮಾರ್ ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹರಿಪ್ರಸಾದ್ ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ತಾಪಂ ಇಒ ಬಿ.ಎಸ್.ಸತೀಶ್, ತಾಲೂಕು ಯೋಜನಾಧಿಕಾರಿ ಸಂದೀಪ್, ವ್ಯವಸ್ಥಾಪಕ ಜಗನ್, ಸಮಿತಿಯ ಸದಸ್ಯರಾದ ಅಳೀಸಂದ್ರ ದಿನೇಶ್, ರವಿಕಾಂತೇಗೌಡ, ನೀಲಾಮೂರ್ತಿ, ಗೀತಾ, ತಮ್ಮಣ್ಣಗೌಡ, ಶರತ್‌ಕುಮಾರ್, ಸಿ.ಧನರಾಜ್, ನವೀನ್, ಅಧಿಕಾರಿಗಳಾದ ರವಿ, ಭಾಗ್ಯಮ್ಮ ಇದ್ದರು.