ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಸರ್ಕಾರ ವಕ್ಫ್ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿದ್ದು, ಇದರಿಂದಾಗಿ ರೈತರು, ಮಠಾಧೀಶರು, ಹಿಂದು ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ ಎಂದರು.ಈ ಕಾಯ್ದೆಯಲ್ಲಿರುವ ಅಂಶಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರದ ವಕ್ಫ ಬೋರ್ಡ್ ಕರ್ನಾಟಕ ಸರ್ಕಾರದ ಭಾಗವಾಗಿದ್ದರೂ, ಕರ್ನಾಟಕ ಸರ್ಕಾರದ ಹಿಡಿತದಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿದೆ. ಅಲ್ಪಸಂಖ್ಯಾತರ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದ ಎಲ್ಲ ಜಿಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಅದಾಲತ್‌ಗಳನ್ನು ನಡೆಸಿ, ಕರ್ನಾಟಕ ಸರ್ಕಾರದ ೧೯೭೪ರ ಗೆಜೆಟ್ ಆಗಿರುವ ಅನ್ವಯ ರೈತರ ಕೃಷಿ ಜಮೀನುಗಳು, ಮಠ, ಮಂದಿರಗಳ ಆಸ್ತಿಗಳನ್ನು ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ನೋಂದಣಿ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ದೂರಿದರು.ಎಲ್ಲ ಜಿಲ್ಲೆಗಳಿಗೆ ಹೋಗಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ರೈತರ ಜಮೀನುಗಳನ್ನು, ಮಠ, ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿಯಾಗಿ ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಇದರ ಪರಿಣಾಮವಾಗಿ ಪ್ರತಿಯೊಬ್ಬ ರೈತರು ಆತಂಕಗೊಂಡಿದ್ದಾರೆ. ಮಠಾಧೀಶರು, ಮಂದಿರದ ಮುಖ್ಯಸ್ಥರು ಆತಂಕಗೊಂಡಿದ್ದಾರೆ. ಕಂದಾಯದಾಖಲೆಗಳಲ್ಲಿ ತಮ್ಮ ಮಾಲೀಕತ್ವದ ಆಸ್ತಿಗಳು ವಕ್ಫ್ ಪಾಲಾಗಿವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದರು.ಆಸ್ತಿ ಮಾಲೀಕರಿಗೆ ಯಾವ ಮಾಹಿತಿಯೂ ಕೊಡದೆ ಗೊತ್ತೆ ಇರದಂತೆ ಸೃಷ್ಟಿ ಮಾಡಿಕೊಂಡಿರುವ ವಕ್ಫ್ ಗೆಜೆಟ್ ಅಧಿಸೂಚನೆಗಳನ್ನು ರದ್ದುಗೊಳಿಸುವ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಗೋಷ್ಠಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಗೀತಾ ಸುತಾರ, ಮಾಜಿ ಶಾಸಕ ಅನಿಲ ಬೆನಕೆ, ನಗರ ಸೇವಕ ಹನುಮತ ಕೊಂಗಾಲಿ ಮತ್ತಿತರರು ಉಪಸ್ಥಿತರಿದ್ದರು.