ಸಾರಾಂಶ
ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಅವರ 46ನೇ ಹುಟ್ಟು ಹಬ್ಬದ ನಿಮಿತ್ತ ಶನಿವಾರ ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ ಆಸ್ಪತ್ರೆ ಆವರಣದಲ್ಲಿ ಅವರ ಅಭಿಮಾನಿಗಳ ಬಳಗ ಹಾಗೂ ಗದುಗಿನ ಅಂಬಿಕಾ ರಕ್ತ ನಿಧಿ ಕೇಂದ್ರದ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.
ರೋಣ: ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಅವರ 46ನೇ ಹುಟ್ಟು ಹಬ್ಬದ ನಿಮಿತ್ತ ಶನಿವಾರ ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ ಆಸ್ಪತ್ರೆ ಆವರಣದಲ್ಲಿ ಅವರ ಅಭಿಮಾನಿಗಳ ಬಳಗ ಹಾಗೂ ಗದುಗಿನ ಅಂಬಿಕಾ ರಕ್ತ ನಿಧಿ ಕೇಂದ್ರದ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಒಟ್ಟು 155 ಜನರು ತಲಾ 350 ಎಂ.ಎಲ್. ರಕ್ತದಾನ ಮಾಡಿದರು. ರಕ್ತದಾನ ಶಿಬಿರ ಉದ್ಘಾಟಿಸಿದ ಮಿಥುನ ಪಾಟೀಲ ಮಾತನಾಡಿ, ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನ ರಕ್ತದಾನವಾಗಿದ್ದು, ಮತ್ತೊಬ್ಬರಿಗೆ ಜೀವದಾನ ಮಾಡಿದಷ್ಟು ಪುಣ್ಯ ಲಭ್ಯವಾಗಲಿದೆ. ರಕ್ತವನ್ನು ಕೃತಕವಾಗಿ ಸಿದ್ಧಪಡಿಸುವುದು ಅಸಾಧ್ಯ.
ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು.
ದಾನಮಾಡಿದ ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ರಕ್ತದಾನ ಮಾಡಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಗೌಡ್ರ ಓಣಿಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡು, ಶಾಲೆಯಲ್ಲಿನ ಪ್ರತಿಯೊಂದು ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸಲಾಯಿತು.
ಈ ವೇಳೆ ಶಶಿಕಲಾ ಪಾಟೀಲ, ಡಾ. ಐ.ಬಿ. ಕೊಟ್ಟೂರಶೆಟ್ಟಿ, ಡಾ.ರಾಜು ಕೆಂಚರಡ್ಡಿ, ಅಪ್ಪು ಗಿರಡ್ಡಿ, ರವಿ ಸಂಗನಬಶೆಟ್ರ, ಮಲ್ಲು ರಾಯನಗೌಡ್ರ, ಯಲ್ಲಪ್ಪ ಕಿರೇಸೂರ, ತಾಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಪುರಸಭೆ ಸದಸ್ಯ ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ಮಲ್ಲಯ್ಯ ಮಹಾಪುರುಷಮಠ, ಆನಂದ ಚಂಗಳಿ, ಮಲಿಕ ಯಲಿಗಾರ, ಗಂಗಯ್ಯ ಗುಮತಿ, ನಜೀರ ಕುರಹಟ್ಟಿ, ನಾಗರಾಜ ಯಳವತ್ತಿ, ವಸಂತ ಹುಲ್ಲೂರ, ಶಿವು ಹುಲ್ಲೂರ ಉಪಸ್ಥಿತರಿದ್ದರು.