ಸಾರಾಂಶ
ಗಾಂಧಿ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ । ಪ್ರಮುಖರಿಂದ ಪುಷ್ಪ ನಮನ
ಕನ್ನಡಪ್ರಭ ವಾರ್ತೆ ಮಡಿಕೇರಿಗುರುವಾರ ನಿಧನರಾದ ಸುಮಾರು ಐದು ದಶಕಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರ ಅಂತ್ಯಸಂಸ್ಕಾರ ಮಡಿಕೇರಿಯ ಕೊಡವ ರುದ್ರಭೂಮಿಯಲ್ಲಿ ಶುಕ್ರವಾರ ನಡೆಯಿತು.
ಕೊಡವ ಸಂಪ್ರದಾಯದ ವಿಧಿ ವಿಧಾನದಂತೆ ಮಿಟ್ಟು ಚಂಗಪ್ಪ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಇದಕ್ಕೂ ಮುನ್ನ ನಗರದ ಗಾಂಧಿ ಮೈದಾನದಲ್ಲಿ ಮಿಟ್ಟು ಚಂಗಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜಕೀಯ ಪಕ್ಷಗಳ ಪ್ರಮುಖರು, ಕೊಡವ ಸಮಾಜ, ವಿವಿಧ ಸಂಘ ಸಮಸ್ಥೆಗಳ ಪ್ರಮುಖರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಮಿಟ್ಟು ಚಂಗಪ್ಪ ಅವರ ಅಂತಿಮ ದರ್ಶನ ಮಾಡಿದರು. ಕೊಡಗು ಉಸ್ತುವಾರಿ ಸಚಿವ ಭೋಸರಾಜು, ಶಾಸಕ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಅರಕಲಗೂಡು ಶಾಸಕ ಎ. ಮಂಜು, ಮಾಜಿ ಸಂಸದ ವಿಶ್ವನಾಥ್, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಬೆಳೆಗಾರ ವಿನೋದ್ ಶಿವಪ್ಪ, ಕಾಂಗ್ರೆಸ್ ಮುಖಂಡ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಚಿತ್ರ ನಟಿ ಶುಭ್ರ ಅಯ್ಯಪ್ಪ ಸೇರಿದಂತೆ ಹಲವರು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜೆ. ಜಾರ್ಜ್, ನನ್ನ ರಾಜಕೀಯ ಜೀವನ ಶುರು ಮಾಡಿದಾಗಿನಿಂದ ಒಳ್ಳೆಯ ಹಿತೈಷಿ ಆಗಿದ್ದರು. ಮೊನ್ನೆಯಷ್ಟೇ ಅವರು ನನ್ನನ್ನು ಅವರ ರೆಸಾರ್ಟ್‌ಗೆ ಕರೆದೊಯ್ದಿದ್ದರು. ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಭೋಸರಾಜು ಮಾತನಾಡಿ, ಕಳೆದ 10 ದಿನದ ಹಿಂದಷ್ಟೇ ಕರೆ ಮಾಡಿ ಕೊಡಗಿಗೆ ಯಾವಾಗ ಬರುತ್ತೀರ ಎಂದು ಕೇಳಿದ್ದರು. ರಾಜ್ಯದ ಹಲವು ನಾಯಕರೊಂದಿಗೆ ಸ್ನೇಹಿತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡಗು ಜಿಲ್ಲೆ ಕಂಡ ಶ್ರೇಷ್ಠ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ನಿಧನ ಕೊಡಗು ಜಿಲ್ಲಾ ಕಾಂಗ್ರೆಸ್‌ಗೆ ತುಂಬಲಾರದ ನಷ್ಟ. ನಮಗೆ ಮಾರ್ಗದರ್ಶಕರಾಗಿದ್ದವರು. ನಮಗೆ ಶಕ್ತಿಯಾಗಿದ್ದರು ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯ ಹಿರಿಯ ರಾಜಕಾರಣಿ, ಸರಳ ಸಜ್ಜನಿಕೆಯ ವ್ಯಕ್ತಿ ಮಿಟ್ಟು ಚಂಗಪ್ಪ ಅವರು ಎಂದಿಗೂ ಕಿಂಗ್ ಆಗಿಲ್ಲ. ಕಿಂಗ್ ಮೇಕರ್ ಆಗಿ ಕೆಲಸ ಮಾಡಿದ್ದರು. ಬಹಳಷ್ಟು ಮಂದಿಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟ ಎಂದರು.