ಶೃಂಗೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ, ಸಹಜ ಸ್ಥಿತಿಯತ್ತ ಜನ

| Published : May 06 2025, 12:19 AM IST

ಶೃಂಗೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ, ಸಹಜ ಸ್ಥಿತಿಯತ್ತ ಜನ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಸೋಮವಾರ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಚಿಕ್ಕಮಗಳೂರು ಬಂದ್ । ಅಂಗಡಿ ಮುಂಗಟ್ಟುಗಳಿಂದ ಉತ್ತಮ ಸ್ಪಂದನೆ । ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಸೋಮವಾರ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಸಂಪೂರ್ಣವಾಗಿ ಬಂದ್ ಆಗಿದ್ದವು. ಬಸ್ ನಿಲ್ದಾಣ, ಶೃಂಗೇರಿ ಪಟ್ಟಣ, ಶ್ರೀ ಮಠ ಸೇರಿದಂತೆ ಪಟ್ಟಣದಲ್ಲಿ ಎಂದಿನಂತೆ ಜನಸಂಚಾರ ಕಂಡು ಬಂದಿತು. ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇತ್ತು. ಕೆಲ ಖಾಸಗಿ ಬಸ್ ಸಂಚಾರವೂ ಇತ್ತು. ಆಟೋ, ಖಾಸಗಿ ವಾಹನಗಳ ಸಂಚಾರವಿತ್ತು. ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರು ಕಂಡುಬಂದರು.

ಕಾಲೇಜು, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ವಾರದ ಸಂತೇ ದಿನವಾಗಿದ್ದ ಸೋಮವಾರ ವ್ಯಾಪಾರ ವಹಿವಾಟುಗಳು ನಡೆಯಲಿಲ್ಲ.ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದರಿಂದ ಅಗತ್ಯ ವಸ್ತುಗಳಿಗೆ ಜನರು ಪರದಾಡುವ ಸ್ಥಿತಿ ಕಂಡುಬಂದಿತು. ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಕಚೇರಿಗಳಲ್ಲಿಯೂ ಜನಸಂಖ್ಯೆ ಕ್ಷೀಣವಾಗಿತ್ತು. ಮದ್ಯಾಹ್ನದ ನಂತರ ಜನಸಂಚಾರ, ವಾಹನ ಸಂಚಾರಗಳು ಹೆಚ್ಚಾಗಿ ಕಂಡುಬಂದಿತು. ಶ್ರೀ ಮಠದಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಬಿಗಿ ಪೋಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ:

ಮಂಗಳೂರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ,ಕಾಶ್ಮೀರ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್,ಬಜರಂಗದಳ ಕಾರ್ಯಕರ್ತರು ಶೃಂಗೇರಿ ಬಸ್ ನಿಲ್ದಾಣದಿಂದ ಶ್ರೀ ಶಂಕರಾಚಾರ್ಯ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಭಾರತೀ ಬೀದಿಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ಹತ್ಯೆ ಖಂಡಿಸಿ ಘೋಷಣೆಗಳನ್ನು ಕೂಗಿದರು.

ನಂತರ ಶಂಕರಾಚಾರ್ಯ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ದಿವೀರ್ ಮಲ್ನಾಡ್ ಮಾತನಾಡಿ, ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ಖಂಡನೀಯವಾಗಿದೆ. ಹಿಂದೂಗಳು ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಹಿಂದೂ ಕಾರ್ಯಕರ್ತರನ್ನು ರಸ್ತೆಯಲ್ಲಿಯೇ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದರು.

ಹಿಂದೂ ಸಂಘಟನೆಯ ಹರೀಶ್ ಶೆಟ್ಟಿ ಮಾತನಾಡಿ, ಕಾಶ್ಮೀರದಲ್ಲಿ ಅಮಾಯಕ ಹಿಂದೂಗಳ ನರಮೇದ ನಡೆದಿದೆ. ಮಂಗಳೂರು ಸುಹಾಸ್ ಹತ್ಯೆ ಘಟನೆಯನ್ನು ಎನ್ಐಎ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂ ಪರ ಸಂಘಟನೆಯ ನಾಗೇಶ್ ಶೆಟ್ಟಿ, ಆದರ್ಶ, ಸುನೀಲ್ ಸಂಪೆಕೊಳಲು, ರವಿ ಸಂಜಯ, ಶ್ರೇಯಸ್ ಕವಿಲೆಕೊಡಿಗೆ, ಪಪಂನ ವೇಣುಗೋಪಾಲ್, ಪ್ರಕಾಶ್ ಎಂ ಎಲ್,ಉಮೇಶ್ ತಲಗಾರು, ನೂರಾರು ಕಾರ್ಯಕರ್ತರು ಇದ್ದರು.