ಕರ್ನಾಟಕ ಬಂದ್‌ಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

| Published : Mar 23 2025, 01:36 AM IST

ಸಾರಾಂಶ

ಮರಾಠಿಗರ ಪುಂಡಾಟಿಕೆ, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಸಕ್ಕರೆ ನಗರಿ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡ ಪರ, ರೈತ ಪರ ಹೋರಾಟಗಾರು ನಗರದಲ್ಲಿ ಬೈಕ್ ಜಾಥಾ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮರಾಠಿಗರ ಪುಂಡಾಟಿಕೆ, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಸಕ್ಕರೆ ನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನಗರದ ಪ್ರಮುಖ ರಸ್ತೆಗಳಾದ ವಿ.ವಿ.ರಸ್ತೆ, ಆರ್.ಪಿ.ರಸ್ತೆ, ನೂರಡಿ ರಸ್ತೆ, ಕೆ.ಆರ್.ರಸ್ತೆ, ಗುತ್ತಲು ರಸ್ತೆ, ವಿವೇಕಾನಂದ ರಸ್ತೆ, ಪೇಟೆ ಬೀದಿ ಸೇರಿದಂತೆ ಹಲವು ರಸ್ತೆಗಳಲ್ಲಿ ಹಲವು ಅಂಗಡಿ-ಮುಂಗಟ್ಟುಗಳು ತೆರೆದಿದ್ದರೆ, ಕೆಲವು ಅಂಗಡಿಗಳು ಮಾತ್ರ ಅಂಗಡಿಗಳನ್ನು ಮುಚ್ಚಿದ್ದವು. ಪ್ರತಿಭಟನಾಕಾರರಿಗೆ ಹೆದರಿ ಕೆಲವು ಅಂಗಡಿಯವರು ಅರ್ಧ ಬಾಗಿಲು ತೆರೆದಿದ್ದರು. ಮತ್ತೆ ಕೆಲವರು ಅಂಗಡಿ ಪೂರ್ಣ ಬಾಗಿಲು ಮುಚ್ಚಿ ಪ್ರತಿಭಟನಾಕಾರರು ಜಾಥಾ ಮೂಲಕ ತೆರಳಿದ ನಂತರ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದುದು ಕಂಡುಬಂದಿತು.

ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು. ವಾಹನಗಳ ಸಂಚಾರ ಮಾಮೂಲಿನಂತಿತ್ತು. ಚಿತ್ರಮಂದಿರಗಳು ಎರಡು ಪ್ರದರ್ಶನವನ್ನು ರದ್ದುಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದವು. ಆಟೋ ಸಂಚಾರವೂ ಎಂದಿನಂತಿತ್ತು. ಸಾರಿಗೆ ಬಸ್‌ಗಳ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಬಂದ್ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳು ಬಲವಂತವಾಗಿ ಅಂಗಡಿ ಮುಚ್ಚಿಸುವ ಪ್ರಯತ್ನಕ್ಕಿಳಿಯದೆ, ರಸ್ತೆಗಳಲ್ಲಿ ಜಾಥಾ ನಡೆಸಿದರು. ಎಲ್ಲೆಡೆ ಬಂದ್ ಸಂಪೂರ್ಣ ಶಾಂತಿಯುವಾಗಿ ನಡೆಯಿತು.

ಸಾರಿಗೆ ಬಸ್ ಚಾಲಕ-ನಿರ್ವಾಹಕ ಸಾಥ್:

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಯವರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಬೆಂಗಳೂರಿನಿಂದ ವಿರಾಜಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.

ಬಸ್‌ಅನ್ನು ರಸ್ತೆಯಲ್ಲಿಯೇ ನಿಲ್ಲಿಸಿದ ಚಾಲಕ -ನಿರ್ವಾಹಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಮ್ಮ ಪರವಾಗಿ ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಯವರಿಗೆ ಧನ್ಯವಾದಗಳು. ಕನ್ನಡಿಗರನ್ನು ಕೆಣಕುವವರ ವಿರುದ್ಧ ಹೋರಾಟದ ಮೂಲಕವೇ ಉತ್ತರ ಕೊಡಬೇಕು. ನಾವೂ ಕನ್ನಡಿಗರು. ಮಹಾರಾಷ್ಟ್ರ ಕಡೆ ಹೋದಾಗ ನಮ್ಮ ಮೇಲೂ ಹಲ್ಲೆ ಆಗಬಹುದು. ಮಹಾರಾಷ್ಟ್ರ ಪೊಲೀಸರು ಮರಾಠಿಗರ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ರಕ್ಷಣೆಗೆ ಯಾರೂ ಇಲ್ಲ. ನಮ್ಮ ಮೇಲೆ ಹಲ್ಲೆ ಮಾಡಿರುವವರಿಗೆ ನಾವು ನುಗ್ಗಿ ಹೊಡೆಯಬೇಕು ಎಂದರು.

ಹೋರಾಟಗಾರರಿಂದ ಬೈಕ್ ಜಾಥಾ:

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪರ, ರೈತ ಪರ ಹೋರಾಟಗಾರು ನಗರದಲ್ಲಿ ಬೈಕ್ ಜಾಥಾ ನಡೆಸಿದರು. ಜಯಚಾಮರಾಜೇಂದ್ರ ವೃತ್ತದಿಂದ ಹೊರಟು ಹೊಳಲು ವೃತ್ತ, ಪೇಟೆ ಬೀದಿ, ವಿ,ವಿ.ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆಗಳಲ್ಲಿ ಬೈಕ್ ಸವಾರರು ಸಂಚರಿಸಿದರು.

ಮರಾಠಿಗರನ್ನು ಮಟ್ಟ ಹಾಕಬೇಕು:

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಮರಾಠಿಗರ ಪುಂಡಾಟಿಕೆ ಹೆಚ್ಚಾಗುತ್ತಿದೆ. ಅವರನ್ನು ಮಟ್ಟ ಹಾಕುವ ಅಗತ್ಯವಿದೆ. ಅದಕ್ಕಾಗಿ ಸರ್ಕಾರ ಕೂಡಲೇ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಪಡಿಸಿದರು.

ಬೆಳಗಾವಿಯ ಮೇಯರ್ ಸ್ಥಾನಕ್ಕೆ ಮರಾಠಿಗರನ್ನು ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದ ಸಾರಿಗೆ ಬಸ್, ನಿರ್ವಾಹಕರಿಗೆ ರಕ್ಷಣೆ ಒದಗಿಸುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ. ಕನ್ನಡಿಗರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದ್ದರೂ ಕಠಿಣ ಕ್ರಮ ಜರುಗಿಸದೆ ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರೈತ ನಾಯಕಿ ಸುನಂದಾ ಜಯರಾ, ರೈತ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಶಿವಳ್ಳಿ ಚಂದ್ರು , ಮಂಡಿ ಬೆಟ್ಟಹಳ್ಳಿ ಮಂಜುನಾಥ, ಕರವೇ ಜಿಲ್ಲಾಧ್ಯಕ್ಷ ಎಚ್.ವಿ.ಜಯರಾಂ ಇತರರಿದ್ದರು.

ಪೊಲೀಸ್ ಭದ್ರತೆ:

ಡಿವೈಎಸ್ಪಿ ನೇತೃತ್ವದಲ್ಲಿ ಐದರಿಂದ ಆರು ಮಂದಿ ಇನ್ಸ್‌ಪೆಕ್ಟರ್‌ಗಳು, ಹತ್ತು ಮಂದಿ ಪಿಎಸ್‌ಐಗಳು, ೧೫೦ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.